ನಕ್ಸಲರ ದಾಳಿ ಆತಂಕದ ನಡುವೆಯೇ ಜಾರ್ಖಂಡ್ ನಲ್ಲಿ 2ನೇ ಹಂತದ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಡಿ.6-ನಕ್ಸಲರ ದಾಳಿ ಆತಂಕದ ನಡುವೆಯೇ ಜಾರ್ಖಂಡ್ ವಿಧಾನಸಭೆಯ ಎರಡನೆ ಹಂತದ ಚುನಾವಣೆಗೆ ಇಂದು ಬೆಳಗ್ಗೆಯಿಂದ ಮತದಾನವಾಗಿದೆ. ಮುಖ್ಯಮಂತ್ರಿ ರಘುವರ್ ದಾಸ್ ಸೇರಿದಂತೆ ಕೆಲವು ಘಟಾನುಘಟಿಗಳ ಭವಿಷ್ಯ ನಿರ್ಧಾರವಾಗಲಿದೆ.  81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಇಂದು ದ್ವಿತೀಯ ಹಂತದ ಚುನಾವಣೆಗಾಗಿ 20 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರೀ ಭದ್ರತೆ ನಡುವೆ ಮತದಾನವಾಗಿದೆ.

ಮುಂvನೆಯ ಚುಮುಚಮು ಚಳಿಯನ್ನೂ ಲೆಕ್ಕಿಸದೆ ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ಮುಖ್ಯಮಂತ್ರಿ ರಘುವರ ದಾಸ್ ಜೆಮ್‍ಶೆಡ್‍ಪುರ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಮಾಜಿ ಸಚಿವ ಸರಯು ರಾಯ್ ಮತ್ತು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಮುಖ್ಯಮಂತ್ರಿಗೆ ಎದುರಾಳಿಯಾಗಿದ್ದಾರೆ.

ಎರಡನೆ ಹಂತದ ಚುನಾವಣೆಯಲ್ಲಿ ಅನೇಕ ಘಟಾನುಘಟಿಗಳೂ ಸಹ ಕಣದಲ್ಲಿದ್ದಾರೆ. ವಿಧಾನಸಭಾಧ್ಯಕ್ಷ ದಿನೇಶ್ ಓರಾವೊನ್, ನಗರಾಭಿವೃದ್ಧಿ ಸಚಿವ ನೀಲಕಾಂತ್ ಸಿಂಗ್ ಮುಂಡಾ, ಜಲ ಸಂಪನ್ಮೂಲ ಸಚಿವ ರಾಮಚಂದ್ರ ಸಾಹಿ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥೆ ಲಕ್ಷಣ್ ಗುಲುವಾ ಅವರ ಹಣೆಬರಹ ಸಹ ನಿರ್ಧಾರವಾಗಲಿದೆ. ಒಟ್ಟು 260 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 48,25,000 ಅಭ್ಯರ್ಥಿಗಳು ಮತ ಚಲಾಯಿಸುವ ಹಕ್ಕು ಹೊಂದಿದ್ದರು.

ಮೊದಲ ಹಂತದ ಚುನಾವಣೆ ವೇಳೆ ನಕ್ಸಲರು ಸೇತುವೆಯೊಂದನ್ನು ಸ್ಫೋಟಿಸಿ ಆತಂಕ ಸೃಷ್ಟಿಸಿದ್ದರು. ನಿನ್ನೆಯಷ್ಟೇ ಡುಮ್ಕಾ ಜಿಲ್ಲೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದರು. ಮಾವೋವಾದಿಗಳ ದಾಳಿ ಆತಂಕದ ಹಿನ್ನೆಲೆಯಲ್ಲಿ ಇಂದಿನ ಚುನಾವಣೆಗೆ ಭಾರೀ ಬಂದೋಬಸ್ತ್ ಮಾಡಲಾಗಿದೆ.

ನ.30ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.64ರಷ್ಟು ಮತದಾನವಾಗಿತ್ತು. ಇನ್ನೂ ಮೂರು ಹಂತಗಳ ಚುನಾವಣೆ ನಡೆಯಲಿದ್ದು, ಡಿ.20ರಂದು ಅಂತಿಮ ಹಂತದ ಮತದಾನವಾಗಲಿದೆ. ಡಿ.23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Facebook Comments