ಬಳ್ಳಾರಿಯ ಜಿಂದಾಲ್ ಕಂಪನಿಗೆ ಭೂಮಿ ಲೀಸ್: ಸರ್ಕಾರದ ಕ್ರಮಕ್ಕೆ ಬಿಜೆಪಿಯಲ್ಲೇ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 8- ಬಳ್ಳಾರಿಯ ಜಿಂದಾಲ್ ಉಕ್ಕು ಕಂಪನಿಗೆ ಕಡಿಮೆ ದರಕ್ಕೆ ಭೂಮಿ ಲೀಸ್​ಗೆ ನೀಡಿದ ಸರ್ಕಾರದ ಕ್ರಮಕ್ಕೆ ಬಿಜೆಪಿಯಲ್ಲೇ ಅಪಸ್ವರ ಎದ್ದಿದೆ. ನಿಷ್ಠ ಬಿಜೆಪಿ ಶಾಸಕರಿಂದ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪಗೆ ನಿಷ್ಠ ಶಾಸಕರು ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಬಸನಗೌಡಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಪೂರ್ಣಿಮಾ ಶ್ರೀನಿವಾಸ್, ಉದಯ್ ಗರುಡಾಚಾರ್ ಅವರು ಸಿಎಂಗೆ ಪತ್ರ ಬರೆದು ಜಿಂದಾಲ್​​ಗೆ ಭೂಮಿ ಪರಭಾರೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಂದಾಲ್​​ಗೆ 3667 ಎಕರೆ ಭೂಮಿ ಶುದ್ಧ ಕ್ರಯಪತ್ರ ಮಾಡಿ ಕೊಟ್ಟ ನಿರ್ಧಾರ ಮರು ಪರಿಶೀಲಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ಕೇವಲ 60 ರಿಂದ 70 ಕೋಟಿ ರೂ.ಗೆ ಶುದ್ಧ ಕ್ರಯಪತ್ರ ಮಾಡಿಕೊಟ್ಡಿದ್ದು ಸರಿಯಲ್ಲ.

ಮೈತ್ರಿ ಸರ್ಕಾರದಲ್ಲೂ ಇದೇ ನಿರ್ಧಾರ ಕೈಗೊಂಡಾಗ ಬಿಜೆಪಿ ಮುಖಂಡರು ನಿಮ್ಮ ನೇತೃತ್ವದಲ್ಲಿ ಅಹೋರಾತ್ರಿ ಹೋರಾಟ‌ ನಡೆಸಿದ್ದೆವು. ನೀವೇ ಮೈತ್ರಿ ಸರ್ಕಾರದ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ್ದಿರಿ. ಈಗ ನಮ್ಮ ಸರ್ಕಾರದಲ್ಲಿ ಅದೇ ತಪ್ಪು ಮಾಡಿದ್ದು ಸರಿಯಲ್ಲ ಎಂದಿದ್ದಾರೆ.

ಜಿಂದಾಲ್​​​ಗೆ ಭೂಮಿ ಕೊಟ್ಟ‌ ವಿಚಾರವನ್ನು ಪಕ್ಷದ‌ ವೇದಿಕೆಯಲ್ಲಿ ಚರ್ಚೆ ಮಾಡಬಹುದಿತ್ತು. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಥವಾ ಬಜೆಟ್ ಅಧಿವೇಶನ ಸಂದರ್ಭದಲ್ಲಾದ್ರೂ ಚರ್ಚಿಸಬಹುದಿತ್ತು. ಮತ್ತೊಮ್ಮೆ ಸಂಪುಟ ಸಭೆಯಲ್ಲಿ ಕೈಗೊಂಡ ಈ‌ ನಿರ್ಧಾರದ ಮರುಪರಿಶೀಲನೆ ಅಗತ್ಯವಿದೆ. ಪಕ್ಷದ ವೇದಿಕೆಯಲ್ಲಿ ಚರ್ಚೆಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ಸರ್ಕಾರ ಈ ನಿರ್ಧಾರ ತೆಗೆದುಕೊಂಡ ನಂತರ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಇತ್ತೇ?, ಪ್ರತಿ ಎಕರೆಗೆ ಎಷ್ಟು ಲಕ್ಷ ರೂ. ನಿಗದಿ ಮಾಡಿ ಮಾರಾಟ ಪ್ರಕ್ರಿಯೆ ನಡೆಸಲಾಗಿದೆ ? ಇದೆಲ್ಲವೂ ಅನುಮಾನ ಮೂಡಿಸುವ ವಿಚಾರವಲ್ಲವೇ ? ಮೈತ್ರಿ ಸರ್ಕಾರದಲ್ಲಿ ನಡೆದಂತೆ ಈಗಲೂ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆಯೇ ? ಎಂದು ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಈಗ ಬಿಜೆಪಿಯ ಶಾಸಕರನ್ನು ಪ್ರಶ್ನಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ರಾಜ್ಯ ಸರ್ಕಾರ ಈ ನಿರ್ಧಾರದ ಬಗ್ಗೆ ಪುನರ್ ಪರಿಶೀಲನೆ ನಡೆಸುವುದು ಅತ್ಯಂತ ಸೂಕ್ತ ಹಾಗೂ ಅನಿವಾರ್ಯವಾಗಿದೆ.

ಹೀಗಾಗಿ ಹಿಂದಿನ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಈ ನಿರ್ಧಾರಕ್ಕೆ ಘಟನೋತ್ತರ ಅನುಮೋದನೆ ನೀಡದೇ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕೈ ಬಿಡುವುದು ಸೂಕ್ತ ಎಂದು ಒತ್ತಾಯಿಸುತ್ತೇವೆ. ಜತೆಗೆ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮತ್ತೊಮ್ಮೆ ಚರ್ಚೆ ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕೆಂದು ಪತ್ರ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Facebook Comments