ಜಿಂದಾಲ್‌ಗೆ ಭೂಮಿ ಪರಭಾರೆ : ವಾರ ಕಳೆದರೂ ರಚನೆಯಾಗಿಲ್ಲ ಸಮಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.24- ಬಳ್ಳಾರಿಯ ತೋರಣಗಲ್‍ನಲ್ಲಿರುವ ಜಿಂದಾಲ್ ಉಕ್ಕು ಮತ್ತು ಅದಿರು ಕಂಪೆನಿಗೆ ಭೂಮಿ ಪರಭಾರೆ ಸಂಬಂಧ ಪರಿಶೀಲನೆಗಾಗಿ ಸಂಪುಟ ಉಪ ಸಮಿತಿ ರಚಿಸುವ ಬಗ್ಗೆ ತೀರ್ಮಾನ ಕೈಗೊಂಡು ವಾರ ಕಳೆದರೂ ಸಮಿತಿ ಮಾತ್ರ ರಚನೆಯಾಗಿಲ್ಲ.

ಸರ್ಕಾರಿ ಭೂಮಿ ಪರಭಾರೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಆದಷ್ಟು ಬೇಗ ವರದಿ ನೀಡಲು ಸಮಿತಿಗೆ ಸೂಚಿಸಲಾಗಿತ್ತು.ಆದರೆ, ಸಂಪುಟ ಉಪಸಮಿತಿ ರಚನೆ ಬಗ್ಗೆ ನಿರ್ಧಾರ ಕೈಗೊಂಡು ಒಂದು ವಾರ ಕಳೆದರೂ ಸರ್ಕಾರ ಮಾತ್ರ ಇನ್ನೂ ಸಮಿತಿ ರಚನೆಯ ಗೋಜಿಗೆ ಹೋಗಿಲ್ಲ. ವಾರ ಕಳೆದರೂ ಉಪ ಸಮಿತಿ ರಚನೆ ಸಾಧ್ಯವಾಗಿಲ್ಲ.

ಜಿಂದಾಲ್‍ಗೆ ಭೂಮಿ ಪರಭಾರೆ ನಿರ್ಧಾರಕ್ಕೆ ಆಡಳಿತ ಪಕ್ಷದ ಶಾಸಕರೂ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇತ್ತ ಪ್ರತಿಪಕ್ಷ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿತ್ತು.

ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಹಾಗೂ ಪ್ರತಿಪಕ್ಷಗಳ ಕೆಂಗಣ್ಣಿನಿಂದ ಪಾರಾಗಲು ಮೈತ್ರಿ ಸರ್ಕಾರ ಸಂಪುಟ ಉಪಸಮಿತಿ ರಚನೆಗೆ ನಿರ್ಧರಿಸಿತ್ತು. ಆದರೆ, ಯಾಕೋ ಸಂಪುಟ ಉಪಸಮಿತಿ ರಚನೆ ಮಾಡಲು ಮೀನಮೇಷ ಎಣಿಸುತ್ತಿದೆ.

ಸಂಪುಟ ಉಪಸಮಿತಿ ರಚನೆ ಕಸರತ್ತು: ಮೈತ್ರಿ ಸರ್ಕಾರ ಇನ್ನೂ ಉಪಸಮಿತಿ ರಚನೆ ಕಸರತ್ತಿನಲ್ಲೇ ತೊಡಗಿದೆ. ಉಪಸಮಿತಿಯ ನೇತೃತ್ವ ಯಾರು ವಹಿಸಬೇಕು, ಯಾರೆಲ್ಲಾ ಸದಸ್ಯರಾಗಬೇಕೆಂಬ ಗೊಂದಲದಲ್ಲೇ ಮೈತ್ರಿ ಸರ್ಕಾರ ಇದೆ ಎನ್ನಲಾಗಿದೆ. ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಉಪ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಒಲವು ವ್ಯಕ್ತವಾಗಿದೆ.

ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ಉಪಸಮಿತಿ ಜಿಂದಾಲ್ ಭೂಮಿ ಪರಭಾರೆ ಪ್ರಕರಣದ ಪರಿಶೀಲನೆ ನಡೆಸುವುದು ಸೂಕ್ತ ಎಂಬುದು ಬಹುತೇಕರ ಸಹಮತವಾಗಿದೆ. ಉಳಿದಂತೆ ಉಪಸಮಿತಿಗೆ ಯಾರೆನ್ನೆಲ್ಲ ಸೇರ್ಪಡೆಗೊಳಿಸಬೇಕು ಎಂಬ ಗೊಂದಲದಲ್ಲಿ ಸರ್ಕಾರ ಬಿದ್ದಂತಿದೆ.
ಉಪಸಮಿತಿಗೆ ಬಳ್ಳಾರಿಯ ಕೆಲ ಶಾಸಕರನ್ನು ಸೇರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಭೂಮಿ ಪರಭಾರೆಗೆ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಆನಂದ್ ಸಿಂಗ್, ನಾಗೇಂದ್ರರನ್ನು ಉಪಸಮಿತಿಯ ಸದಸ್ಯರನ್ನಾಗಿ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇತ್ತ ಬೃಹತ್ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಉಪಸಮಿತಿಯ ಭಾಗವಾಗದಿರಲು ನಿರ್ಧರಿಸಿದ್ದಾರೆ.

ಉಳಿದಂತೆ ಇಬ್ಬರು ಮೂವರು ಸಚಿವರು ಉಪಸಮಿತಿಯ ಸದಸ್ಯರಾಗುವ ಸಾಧ್ಯತೆ ಇದ್ದು, ಸಚಿವ ಡಿ.ಕೆ.ಶಿವಕುಮಾರ್, ಕೃಷ್ಣ ಭೈರೇಗೌಡ, ತುಕಾರಾಂ ಅಥವಾ ಪರಮೇಶ್ವರ್ ನಾಯಕ್ ಅವರನ್ನು ಬಹುತೇಕ ಉಪಸಮಿತಿಯ ಸದಸ್ಯರಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಸಂಪುಟ ಉಪಸಮಿತಿ ರಚನೆ ಸಂಬಂಧ ನಿರ್ಧಾರ ಕೈಗೊಂಡು ಒಂದು ವಾರ ಕಳೆದರೂ ಇನ್ನೂ ಉಪಸಮಿತಿ ರಚನೆಯಾಗದೇ ಇರುವುದು ಹಲವು ಅನುಮಾನ, ಗೊಂದಲಗಳಿಗೆ ಮೈತ್ರಿ ಸರ್ಕಾರ ಎಡೆ ಮಾಡಿಕೊಟ್ಟಂತಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin