ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆ ಸೀಲ್ ಡೌನ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2- ಕಾನ್ಸ್‍ಟೆಬಲ್ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆಯನ್ನು ಸಂಪೂರ್ಣ ಸೀಲ್‍ಡೌನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ದಿನದ ಮೂರು ಶಿಫ್ಟ್‍ಅನ್ನೂ ಪೊಲೀಸ್ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ 45 ವರ್ಷದ ಪೊಲೀಸ್ ಕಾನ್ಸ್‍ಟೆಬಲ್ ಒಬ್ಬರಿಗೆ ನಿನ್ನೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

ಇವರು ಮೂರು ಶಿಫ್ಟ್‍ನಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 70 ಜನರನ್ನು ಸಂಪರ್ಕಿಸಿದ್ದರು. ಈ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಜೆಜೆ ನಗರ ಠಾಣೆಯನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಈ ಹಿಂದೆ ಇದೇ ಠಾಣೆಯಲ್ಲಿ ಕಾರ್ಪೊರೇಟರ್ ರಂಜಾನ್ ಊಟ ಕೂಡ ಹಾಕಿಸಿದ್ದರು.

ಈ ಸಂದರ್ಭದಲ್ಲಿ ಕೊರೊನಾ ಸೋಂಕಿತ ಪೊಲೀಸ್ ಕಾನ್ಸ್‍ಟೆಬಲ್ ಕೂಡ ಇದ್ದರು. ಸದ್ಯ ಆರೋಗ್ಯಾಧಿಕಾರಿಗಳು ಠಾಣೆಯ ಕೆಲ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಿದ್ದಾರೆ.

ಜೆಜೆ ನಗರಪೊಲೀಸ್ ಠಾಣೆ ಸೀಲ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ತಿಳಿಸಿದ್ದಾರೆ. ಡಿಸಿಪಿ, ಅಡಿಷನಲ್ ಸಿಪಿ ಈ ಬಗ್ಗೆ ವಿಚಾರಣೆ ನಡೆಸಿ ಸೀಲ್‍ಡೌನ್ ಮಾಡುವ ಬಗ್ಗೆ ವರದಿ ನೀಡಲಿದ್ದಾರೆ. ವರದಿ ನಂತರ ಡಿಜಿ ಅವರು ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಪೊಲೀಸರಿಗೆ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಇಂದು ಮಧ್ಯಾಹ್ನ ಡಿಜಿ ಕಚೇರಿಯಲ್ಲಿ ಸಭೆ ಇದೆ. ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಪ್ರತಿದಿನಪೊಲೀಸ್ ಸಿಬ್ಬಂದಿ 200ಕ್ಕೂ ಹೆಚ್ಚು ಅಪರಿಚಿತರನ್ನು ಸಂಪರ್ಕಿಸುತ್ತಾರೆ.

ಅವರೊಂದಿಗೆ ಚರ್ಚಿಸುತ್ತಾರೆ. ಹೀಗಾಗಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಡಿಜಿ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

Facebook Comments