“ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಇದು ಚೀನಾಗೂ ಗೊತ್ತಿದೆ”

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.10- ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಭಾರತ ಪ್ರವಾಸಕ್ಕೂ ಮುನ್ನವೇ ಕೇಂದ್ರ ವಿದೇಶಾಂಗ ಇಲಾಖೆ ಚೀನಾ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದು, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಪುನರ್‍ಚ್ಛರಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಕಾಶ್ಮೀರ ವಿಚಾರ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಈ ಕುರಿತಂತೆ ಭಾರತದ ವಿರುದ್ಧ ವಾಗ್ದಾಳಿ ನಡೆಸಿರುವ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುತ್ತಿದೆ.ಏತನ್ಮಧ್ಯೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಇದೇ ಅ. 11ರಂದು(ನಾಳೆ) ಭಾರತಕ್ಕೆ ಆಗಮಿಸಲಿದ್ದು, ಮತ್ತೆ ಕಾಶ್ಮೀರ ವಿಚಾರ ಚರ್ಚೆ ಮಾಡುವ ಸಾಧ್ಯತೆ ಇದೆ.

ಇದೇ ಕಾರಣಕ್ಕೆ ಭಾರತ ಸರ್ಕಾರ ಇದೀಗ ಕಾಶ್ಮೀರ ವಿಚಾರವಾಗಿ ಚೀನಾಗೆ ತನ್ನ ನಿಲುವು ಸ್ಪಷ್ಟಪಡಿಸಿದ್ದು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಈ ಬಗ್ಗೆ ಚೀನಾಗೆ ಅರಿವಿದೆ ಎಂದು ಹೇಳುವ ಮೂಲಕ ಕಾಶ್ಮೀರ ಕುರಿತ ಚರ್ಚೆ ಬೇಡ ಎಂಬ ಪರೋಕ್ಷ ಸಂದೇಶ ಸಾರಿದೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಕಾಶ್ಮೀರ ವಿಚಾರವಾಗಿ ಭಾರತ ಎಂದೂ ತನ್ನ ನಿಲುವು ಬದಲಿಸಿಲ್ಲ. ಬದಲಿಸುವುದೂ ಇಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇತರೆ ದೇಶಗಳು ಮಧ್ಯ ಪ್ರವೇಶ ಮಾಡುವ ಅಗತ್ಯವಿಲ್ಲ. ಈ ಬಗ್ಗೆ ಚೀನಾಗೂ ಅರಿವಿದೆ ಎಂದು ಹೇಳುವ ಮೂಲಕ ಚೀನಾ ಕಾಶ್ಮೀರ ವಿಚಾರ ಮಾತನಾಡದಂತೆ ಪರೋಕ್ಷ ಸೂಚನೆ ನೀಡಿದರು.

Facebook Comments