ಬೃಹತ್ ಉದ್ಯೋಗ ಮೇಳ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಫೆ.10-ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿರುವ ಬೃಹತ್ ಉದ್ಯೋಗ ಮೇಳಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದರು. ಕೋಲಾರ-ಶ್ರೀನಿವಾಸಪುರ ಮುಖ್ಯರಸ್ತೆಯಲ್ಲಿರುವ ಸಿ.ಭೈರೇಗೌಡ ತಾಂತ್ರಿಕ ವಿದ್ಯಾಲಯದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಅಬಕಾರಿ ಸಚಿವ ಎಚ್.ನಾಗೇಶ್ ಚಾಲನೆ ನೀಡಲಿದ್ದಾರೆ.

ಶಾಸಕ ಶ್ರೀನಿವಾಸ್‍ಗೌಡ ಅಧ್ಯಕ್ಷತೆ ವಹಿಸಲಿದ್ದು, ಸಂಸದರಾದ ಮುನಿಸ್ವಾಮಿ ಹಾಗೂ ಹಲವಾರು ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಉದ್ಯೋಗ ಮೇಳಕ್ಕೆ 400 ಕ್ಕೂ ಹೆಚ್ಚು ಕಂಪನಿಯೊಂದಿಗೆ ಮಾತುಕತೆ ನಡೆಸಿ ದ್ದೇವೆ. ಇದೀಗ 250ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ನೀಡುವ ಸಲುವಾಗಿ ಉದ್ಯೋಗ ಮೇಳಕ್ಕೆ ಆಗಮಿಸಲಿವೆ. ಇವುಗಳ ಪೈಕಿ ಎಫ್‍ಕೆಸಿಸಿಐ, ಕಾಸಿಯಾ, ವಿವಿಧ ಇಂಡಸ್ಟ್ರಿಯಲ್ ಅಸೋಸಿಯೇಷನ್‍ಗಳು, ಸಾಫ್ಟ್‍ವೇರ್ ಕಂಪನಿ ಅಸೋಸಿಯೇಷನ್‍ಗಳು ಕೈ ಜೋಡಿಸಿವೆ ಎಂದು ಅವರು ಹೇಳಿದರು.

ಉದ್ಯೋಗ ಮೇಳದಲ್ಲಿ ಮುಖ್ಯವಾಗಿ ವಿಕಲಚೇತನರನ್ನೇ ನೇಮಕ ಮಾಡಿಕೊಳ್ಳುವಂತಹ ಕಂಪನಿಗಳು ಭಾಗವಹಿಸುತ್ತಿದ್ದು, ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಮೇಳಕ್ಕೆ ಕಾಲೇಜಿನ ಕೊಠಡಿಗಳನ್ನು ಬಳಸಿಕೊಂಡಿರುವುದಲ್ಲದೆ, 100ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಆನ್‍ಲೈನ್ ಮೂಲಕ 11 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ಮೇಳದಲ್ಲೂ ನೋಂದಣಿ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.

ಮೇಳಕ್ಕೆ ಆಗಮಿಸುವ ಉದ್ಯೋಗಾಕಾಂಕ್ಷಿಗಳಿಗೆ ಜಿಲ್ಲೆಯ ಸರ್ಕಾರಿ ಬಸ್‍ಗಳ ಆವರ್ತನ(ಫ್ರೀಕ್ವೆನ್ಸಿ) ವನ್ನು ಹೆಚ್ಚಳ ಮಾಡಲಾಗಿದೆ. ಕೋಲಾರ ಬಸ್‍ನಿಲ್ದಾಣದಿಂದ ಪ್ರತಿ 10 ನಿಮಿಷಕ್ಕೊಂದು ಬಸ್ ವ್ಯವಸ್ಥೆ ಮಾಡಲಾಗಿದ್ದು, ಮೇಳದಲ್ಲಿ ಊಟ ವ್ಯವಸ್ಥೆ ಇರುತ್ತದೆ ಎಂದರು.

Facebook Comments