ಜೋಡಿ ಕೊಲೆ ಮಾಡಿದ್ದ ಆರೋಪಿಗೆ ಮರಣದಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.14- ಹದಿನೇಳು ವರ್ಷದ ಹಿಂದೆ ಪತ್ನಿ ಹಾಗೂ ಆಕೆಯ ಅಕ್ಕನ ಮಗಳನ್ನು ಕೊಲೆ ಮಾಡಿದ್ದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ತೀರ್ಪು ನೀಡಿದೆ. ಉತ್ತರ ಪ್ರದೇಶ ಮೂಲದ ಇಷಾಕ್‍ಪಾಷ ಮರಣದಂಡನೆಗೆ ಗುರಿಯಾದ ಆರೋಪಿ.

ನಗರದ ಬಿಡಿ ಕಾಲೋನಿಯಲ್ಲಿ ವಾಸವಾಗಿದ್ದ ಇಷಾಕ್‍ಪಾಷ ಮರಗೆಲಸ ಮಾಡಿಕೊಂಡಿದ್ದನು. ಈತ ವಿವಾಹವಾಗಿದ್ದರೂ ಸಿದ್ದಿಕಿ ಭಾನು ಎಂಬಾಕೆಯನ್ನು ಮದುವೆಯಾಗಿದ್ದನು. ಈತ ಕೆಲಸಕ್ಕೆ ಹೋಗದೆ ಅಲ್ಲಿ ಇಲ್ಲಿ ಸುತ್ತಾಡುತ್ತ ಮನೆಗೆ ಬಂದು ಪತ್ನಿಗೆ ಹಣಕ್ಕಾಗಿ ಒತ್ತಾಯಿಸುತ್ತಿದ್ದನು. 2009ರ ಮೇ 7ರಂದು ದಂಪತಿ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ಇಷಾಕ್‍ಪಾಷ ಮರಗೆಲಸಕ್ಕೆ ಬಳಸುವ ಉಳಿಯಿಂದ ಪತ್ನಿಯ ಕತ್ತಿಗೆ ತಿವಿದು ಕೊಲೆ ಮಾಡಿದ್ದ.

ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಸಿದ್ದಿಕಿ ಭಾನು ಅವರ ಅಕ್ಕನ ಮಗಳು ಸುರೇಯಾ ಭಾನು ಈ ವಿಷಯವನ್ನು ಸಂಬಂಧಿಕರಿಗೆ ಹೇಳುತ್ತಾಳೆಂದು ಆಕೆಯನ್ನೂ ಸಹ ಉಳಿಯಿಂದ ತಿವಿದು ಕೊಲೆಗೆ ಯತ್ನಿಸಿ ತಲೆಮರೆಸಿಕೊಂಡಿದ್ದನು. ಈ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಯಾ ಭಾನುವಿನಿಂದ ಹೇಳಿಕೆ ಪಡೆದುಕೊಂಡಿದ್ದರು.

ತದನಂತರದಲ್ಲಿ ಸುರೇಯಾ ಭಾನು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಸುರೇಯಾ ಭಾನು ಮರಣಪೂರ್ವ ಹೇಳಿಕೆ ನೀಡಿದ್ದ ಆಧಾರದ ಮೇಲೆ ಇಷಾಕ್ ಪಾಷನ ಹುಡುಕಾಟ ನಡೆಸುತ್ತಿದ್ದರು. ಆದರೆ, ಈತ ಅಂದಿನಿಂದ ತಲೆಮರೆಸಿಕೊಂಡಿದ್ದನು.

2017 ಫೆಬ್ರವರಿ 21ರಂದು ಉದಯಗಿರಿ ಠಾಣೆಯ ಅಂದಿನ ಇನ್ಸ್‍ಪೆಕ್ಟರ್ ಸಂತೋಷ್ ಅವರು ಆರೋಪಿ ಇಷಾಕ್ ಪಾಷನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 4ನೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು ತೀರ್ಪು ನೀಡಿ ಇಷಾಕ್ ಪಾಷಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗರಾಜು ವಾದ ಮಂಡಿಸಿದ್ದರು.

Facebook Comments