ದರ್ಶನ್ ‘ಪುಡಿಂಗ್’ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರೇಮ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.18- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅನಗತ್ಯವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಿ ಪುಡಂಗು ಎಂದು ಹೇಳಿದ್ದು ಬೇಸರವಾಗಿದೆ. ಅವರಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ನಿರ್ದೇಶಕ ಪ್ರೇಮ್ ವಿಷಾದಿಸಿದ್ದಾರೆ.

ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಕಲಾವಿದ ಬೆಳೆಯಬೇಕಾದರೂ ನಿರ್ದೇಶಕನ ಪಾತ್ರ ಬಹಳ ಮುಖ್ಯವಾಗಿರುತ್ತದೆ.ನನ್ನಷ್ಟೇ ಅಲ್ಲ ಯಾವ ನಿರ್ದೇಶನಕ ಕುರಿತು ಈ ರೀತಿ ಮಾತನಾಡಬಾರದು ಅದು ಶೋಭೆ ತರುವುದಿಲ್ಲ ಎಂದಿದ್ದಾರೆ.

ದರ್ಶನ್ ನಮ್ಮ ಕುಟುಂಬದ ಸ್ನೇಹಿತ. ನನ್ನ ಪತ್ನಿ ರಕ್ಷಿತಾ ಅವರು ಈಗಲೂ ದರ್ಶನ ಅವರ ಶ್ರೇಯೋಭಿಲಾಷಿ. ಪ್ರತಿ ವಿಷಯಕ್ಕೂ ಟ್ವಿಟ್ ಮಾಡಿ ಶುಭಾಶಯ ಹೇಳುತ್ತಾರೆ. ಎದುರಿಗೆ ಸಿಕ್ಕರೆ ಸಹಜವಾಗಿ ಮಾತನಾಡುತ್ತೇವೆ. ನಮ್ಮ ನಡುವೆ ವೈಯಕ್ತಿಕವಾಗಿ ಯಾವುದೇ ದ್ವೇಷಗಳಿಲ್ಲ .

ದರ್ಶನ್ ಅವರ ತಾಯಿ ನನ್ನನ್ನು ಮಗನಂತೆ ಕಂಡಿದ್ದಾರೆ. ಕೈತುತ್ತು ತಿನ್ನಿಸಿದ್ದಾರೆ. ಕರಿಯಾ ಚಿತ್ರದ ಚಿತ್ರೀಕರಣದ ವೇಳೆ ಅವರು ನನಗೆ ಊಟ ಹಾಕಿದ್ದಾರೆ. ಎರಡು ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಇದೆ. ಆದರೂ ದರ್ಶನ್ ಈ ರೀತಿ ಏಕೆ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ.

ರಾಬರ್ಟ್ ಚಿತ್ರದ ಬಳಿಕವೂ ಮೂರ್ನಾಲ್ಕು ಬಾರಿ ದರ್ಶನ್ ಅವರ ಜತೆ ಮಾತನಾಡಿದ್ದೆ. ಅವರಿಗಾಗಿ ಚಿತ್ರ ಮಾಡಲು ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದೆ. ಅದನ್ನು ಅವರಿಗೆ ಹೇಳಿಯೂ ಇದ್ದೆ. ಈವರೆಗಿನ ಮಾದರಿಗಳನ್ನು ಬಿಟ್ಟು ಹೊಸ ಪ್ರಯೋಗಗಳನ್ನು ಮಾಡೋಣ, ವಿಭಿನ್ನವಾದ ಚಿತ್ರಗಳನ್ನು ಮಾಡೋಣ ಎಂದು ಹೇಳಿದ್ದೆ.

ನಿರ್ಮಾಪಕ ಉಮಾಪತಿಯವರನ್ನು ದರ್ಶನ್‍ಗೆ ನಾನೇ ಪರಿಚಯ ಮಾಡಿಸಿದ್ದು. ನಾನು ನಿರ್ದೇಶಿಸಿದ ವಿಲ್ಲನ್ ಚಿತ್ರ ವಿಳಂಬವಾಗಿದ್ದರಿಂದ ದರ್ಶನ್ ಅವರ ಡೇಟ್ ವ್ಯರ್ಥವಾಗಬಾರದು ಎಂದು ಉಮಾಪತಿಯವರು ಬೇರೆ ನಿರ್ದೇಶಕರಿಂದ ರಾಬರ್ಟ್ ಚಿತ್ರ ಮಾಡಿಸಿದ್ದರು. ಅದು ಯಶಸ್ವಿಯೂ ಆಯಿತು ಎಂದಿದ್ದಾರೆ.

ದರ್ಶನ್ ಅವರ ಬೇರೆ ವಿಚಾರಗಳಿಗೂ ನನಗೂ ಸಂಬಂಧವಿಲ್ಲ. ನಿನ್ನೆ ದರ್ಶನ್ ಹೇಳಿಕೆಯ ಬಳಿಕ ಅವರ ಅಭಿಮಾನಿಗಳು ನನಗೆ ಕರೆ ಮಾಡಿ ಬೇಸರ ಮಾಡಿಕೊಳ್ಳಬೇಡಿ ಎಂದು ಕ್ಷಮೆಯಾಚಿಸಿದ್ದಾರೆ. ನಾನು ಈ ವಿಷಯದಲ್ಲಿ ಯಾರಿಂದಲೂ ಕ್ಷಮೆ ನಿರೀಕ್ಷೆ ಮಾಡುವುದಿಲ್ಲ. ಅದರಲ್ಲೂ ಪ್ರಮುಖವಾಗಿ ಅಭಿಮಾನಿಗಳು ಕ್ಷಮೆ ಕೇಳಬಾರದು. ಅವರೇ ನಮ್ಮ ಅನ್ನದಾತರು. ಅವರು ಇಲ್ಲದೇ ಹೋದರೆ ನಾವ್ಯಾರೂ ಇಲ್ಲ ಎಂದಿದ್ದಾರೆ.

ನನಗಾದ ನೋವನ್ನು ದರ್ಶನ್ ಅವರಿಗೆ ಪತ್ರ ಬರೆದು ತಿಳಿಸಿದ್ದೇನೆ ಎಂದಿರುವ ಪ್ರೇಮ್, ಪತ್ರಿಕಾಗೋಷ್ಠಿಗೂ ಮುನ್ನ ನಿನ್ನೆ ರಾತ್ರಿಯೇ ಫೇಸ್‍ಬುಕ್‍ನಲ್ಲಿ ಸುದೀರ್ಘವಾದ ಪತ್ರ ಬರೆದಿದ್ದಾರೆ.

ಪತ್ರದಲ್ಲಿ… ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್ ರವರು, ಅಂಬರೀಷ್ ರವರು, ವಿಷ್ಣುವರ್ಧನ್ ರವರು ಹಾಗೂ ರಜನಿಕಾಂತ್ ರವರು ಒಬ್ಬ ಒಳ್ಳೆ ನಿರ್ದೇಶಕ ಎಂದು ಬೆನ್ನು ತಟ್ಟಿದ್ರು.

ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗೆ ಕೊಂಬು ಬರ್ಲಿಲ್ಲ. ನಾನು ನಂದೇ ಆದ್ ಸ್ಟೆ ೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು.. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆಯಿದ್ರು. ಇದ್ರ ಬಗ್ಗೆ ನಿಮಗೂ ಗೊತ್ತು, ನನಗು ಗೊತ್ತು.

ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್ ನಲ್ಲೇ ಸಿನಿಮಾ ಮಾಡಿ, ಇಲ್ಲಾ ನಿಮ್ ಬ್ಯಾನರ್ ನಲ್ಲೇ ಸಿನಿಮಾ ಮಾಡೋಣ ಅಂತ ಚರ್ಚೆ ಮಾಡಿದ್ವಿ. ಆದರೆ, ನನಗೆ ಉಮಾಪತಿಯವರು, ನೀವು ಮತ್ತು ದರ್ಶನ್ ಸೇರಿ ಸಿನಿಮಾ ಮಾಡ್ಕೊಡಿ ಅಂತ ಕೇಳಿದ್ರು. ಅದಕ್ಕಾಗಿ ನಾನು ನಿಮಗೆ ಉಮಾಪತಿ ಅವರನ್ನು ಪರಿಚಯ ಮಾಡಿಸಿದೆ.

ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ.

ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾಗೆ ಹಾರೈಸಿದವನು ನಾನು. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ. ಇದ್ರ ಮಧ್ಯೆ ನನ್ ಹೆಸ್ರು ಯಾಕೆ.. ದರ್ಶನ್ ಅವ್ರೆ. ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ , ಅವ್ರಿಗೆ ಕೊಂಬು ಇರಲ್ಲ..

ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆ ಎಂದು ಪ್ರತಿಯೊಬ್ಬ ಕಲಾವಿನಿಗೂ ಗೊತ್ತು. ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ… Thank you for your kind words.. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ ಎಂದು ಬರೆದಿದ್ದಾರೆ.

Facebook Comments

Sri Raghav

Admin