ಆಡಳಿತ ಮತ್ತು ಪ್ರತಿಪಕ್ಷಗಳ ಜಂಗೀ ಕುಸ್ತಿಗೆ ವೇದಿಕೆ ಸಜ್ಜು, ಸೋಮವಾರದಿಂದ 15ನೇ ಜಂಟಿ ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.15- ರಾಜಕೀಯ ಗೊಂದಲದ ನಡುವೆಯೇ ಸೋಮವಾರದಿಂದ 15ನೇ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಂಗೀ ಕುಸ್ತಿಗೆ ವೇದಿಕೆಯಾಗಲಿದೆ.  ಸೋಮವಾರ ಬೆಳಗ್ಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಸಂತಾಪ ನಿರ್ಣಯ ಮಂಡನೆಯಾಗಲಿದ್ದು, ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತುದಿಗಾಲಲ್ಲಿ ನಿಂತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ರೂಢ ಬಿಜೆಪಿಯ ವೈಫಲ್ಯಗಳನ್ನು ಸದನದಲ್ಲಿ ಎತ್ತಿ ಹಿಡಿಯಲು ಸಜ್ಜಾಗಿದೆ.
ಇದಕ್ಕೆ ಪ್ರತಿ ತಂತ್ರ ರೂಪಿಸಿರುವ ಬಿಜೆಪಿ ಕೂಡ ಪ್ರತಿ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ನಾಳೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಕಲಾಪದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಣತಂತ್ರ ರೂಪಿಸಲಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದು 2ನೇ ಅಧಿವೇಶನವಾಗಿದೆ. ಮಾ.5ರಂದು ಹಣಕಾಸು ಖಾತೆಯನ್ನು ಹೊಂದಿರುವ ಯಡಿಯೂರಪ್ಪ 2020-21 ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಹೀಗಾಗಿ ಈ ಅಧಿವೇಶನ ಅತ್ಯಂತ ಮಹತ್ವ ಪಡೆದುಕೊಂಡಿದೆ.  ರಾಜ್ಯದ ಪ್ರಚಲಿತ ವಿದ್ಯಮಾನಗಳು ಹಾಗೂ ನಾಡಿನ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಹವಣಿಸುತ್ತಿವೆ.

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ವೇಳೆ ಇಬ್ಬರು ಸಾವನ್ನಪ್ಪಿದ ಗೋಲಿಬಾರ್ ಪ್ರಕರಣ, ಬೀದರ್‍ನ ಶಾಹಿನ್ ಶಾಲೆಯಲ್ಲಿ ಸಿಎಎ ಕಾಯ್ದೆ ವಿರೋಧಿಸಿ ನಡೆಸಿದ ನಾಟಕ ಸಂಬಂಧ ಶಿಕ್ಷಕರು ಮತ್ತು ತಾಯಿಯನ್ನು ಬಂಧಿಸಿದ್ದು, ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಗಳು, ಮಂಗಳೂರು ಗಲಭೆಯಲ್ಲಿ ಪೊಲೀಸರ ವೈಫಲ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ವಿಡಿಯೋಗಳು ಸದನದಲ್ಲಿ ಪ್ರತಿಧ್ವನಿಸಲಿವೆ.

ಈಗಾಗಲೇ ಕುಮಾರಸ್ವಾಮಿ ಅವರೇ ಮಂಗಳೂರು ಗಲಭೆಯನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದರು. ಸರ್ಕಾರ ಈ ಬಗ್ಗೆ ಸಮರ್ಪಕ ಉತ್ತರ ನಡೆದಿದ್ದರೆ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಗುಡುಗಿದ್ದರು. ಈ ನಡುವೆ ನಿನ್ನೆಯಷ್ಟೇ ಬೀದರ್‍ಗೆ ತೆರಳಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೀದರ್‍ನ ಶಾಹಿನ್ ಶಿಕ್ಷಣ ಸಂಸ್ಥೆಯ ಮೇಲೆ ಪೊಲೀಸರು ನಡೆದುಕೊಂಡಿರುವ ರೀತಿ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದ್ದರು.

ಒಂದು ವೇಳೆ ಪ್ರತಿಪಕ್ಷದವರು ಮಂಗಳೂರು ಮತ್ತು ಬೀದರ್ ಪ್ರಕರಣಗಳ ಬಗ್ಗೆ ಚರ್ಚಿಸಲು ಮುಂದಾದರೆ ಸದನದಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ಸಿಲುಕಿರುವ ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ದವೂ ಹೋರಾಟ ನಡೆಯುವ ಸಾಧ್ಯತೆ ಇದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಅವರು ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸಿದ್ದರ ಆರೋಪಕ್ಕೆ ಸಿಲುಕಿದ್ದಾರೆ.

ಇಂತಹ ಆರೋಪ ಹೊತ್ತಿರುವ ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿರುವುದಕ್ಕೆ ಈಗಾಗಲೇ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕೆಂಡ ಕಾರಿವೆ. ಸದನದಲ್ಲಿ ಇದು ಕೂಡ ಮಾರ್ಧನಿಸಲಿದೆ ಎಂದು ಹೇಳಲಾಗುತ್ತಿದೆ.  ಇನ್ನು ಕಳೆದ ಅಕ್ಟೋಬರ್-ನವಂಬರ್‍ನಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಲಕ್ಷಾಂತರ ಜನರು ಮನೆಮಠ, ಸೂರು, ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂದಾಜು 35 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ರಾಜ್ಯ ಸರ್ಕಾರವೇ ಕೇಂದ್ರಕ್ಕೆ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಈವರೆಗೆ 1800 ಕೋಟಿ ಹಣ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರದ ನಿರೀಕ್ಷೆಯಂತೆ ಪರಿಹಾರದ ಮೊತ್ತವನ್ನು ನೀಡಿಲ್ಲ ಎಂಬ ಆರೋಪವಿದೆ.  ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಲು ಸಜ್ಜಾಗಿವೆ. ಜೊತೆಗೆ ಈ ಬಾರಿ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಬರಬೇಕಾದ 12 ಸಾವಿರ ಕೋಟಿ ಕಡಿತಗೊಳ್ಳಲಿದೆ ಎಂಬ ಆತಂಕ ಎದುರಾಗಿದೆ. ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್‍ವೈ ಹೇಳುತ್ತಿದ್ದರಾದರೂ ಪ್ರತಿಪಕ್ಷಗಳು ಮಾತ್ರ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸುತ್ತಿವೆ.

ಇನ್ನು ಗೌರವಧನ ಹೆಚ್ಚಳ ಮಾಡಬೇಕೆಂದು ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಪಕ್ಷಗಳು ಛಾಟಿ ಬೀಸುವ ಸಾಧ್ಯತೆ ಇದೆ.  ಕಲಾಪದಲ್ಲಿ ಮಾಧ್ಯಮಗಳಿಗೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಡಿವಾಣ ಹಾಕಿರುವುದಕ್ಕೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಇದು ಕೂಡ ಚರ್ಚೆಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಈ ಬಾರಿ ಒಟ್ಟು 25 ದಿನಗಳ ಕಾಲ ಅಧಿವೇಶನ ನಡೆಯುತ್ತಿದ್ದು, ಈ ಬಾರಿ ಆರು ಮಸೂದೆಗಳು ಮಂಡನೆಯಾಗಲಿವೆ.

Facebook Comments