ಸೋಮವಾರದಿಂದ 25 ದಿನ ಜಂಟಿ ಅಧಿವೇಶನ, ನೇರಪ್ರಸಾರಕ್ಕೆ ಕಡಿವಾಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.14- ಮುಂದಿನ ಸೋಮವಾರದಿಂದ 15ನೇ ವಿಧಾನಸಭೆಯ ಜಂಟಿ ಅಧಿವೇಶನ ಪ್ರಾರಂಭವಾಗಲಿದ್ದು, ಈ ಬಾರಿ 25 ದಿನ ಕಲಾಪ ನಡೆಯಲಿದೆ. ಫೆ.17ರಿಂದ 20ರವರೆಗೆ ಜಂಟಿ ಅಧಿವೇಶನ ಹಾಗೂ ಮಾ.2ರಿಂದ 31ರವರೆಗೆ ಕಲಾಪ ನಡೆದು ಒಟ್ಟು 25 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಸೋಮವಾರ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್‍ನ ಸದಸ್ಯರು ಭಾಗವಹಿಸಲಿದ್ದು, ಅಂದು ರಾಜ್ಯಪಾಲರ ಭಾಷಣದ ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿ ಕಲಾಪವನ್ನು ಮುಂದೂಡಲಾಗುವುದು ಎಂದು ಹೇಳಿದರು.

ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದ್ದು, ಮಾ.4ರಿಂದ ಪುನಃ ಮುಂದುವರೆದ ಅಧಿವೇಶನ ಆರಂಭವಾಗಲಿದೆ. ಮಾ.5ರಂದು 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2020-21ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆ. ನಂತರ ಮಾ.31ರವರೆಗೆ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಬಾರಿಯ ಅಧಿವೇಶನದಲ್ಲಿ ಒಟ್ಟು ಆರು ವಿಧೇಯಕಗಳು ಹಾಗೂ ಬಾಕಿ ಇರುವ ಒಂದು ವಿಧೇಯಕವನ್ನು ಮಂಡನೆ ಮಾಡಲಾಗುವುದು. ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ 2020, ಕರ್ನಾಟಕ ನಾವಿನ್ಯತ ಪ್ರಾಧಿಕಾರ ವಿಧೇಯಕ 2020, ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ವಿಧೇಯಕ 2020, ಕರ್ನಾಟಕ ರಾಜ್ಯ ಭಾಷೆ (ತಿದ್ದುಪಡಿ) ವಿಧೇಯಕ 2020, ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ 2020 ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ 2020 ಮಂಡನೆಯಾಗಲಿವೆ.

ಕಳೆದ ಅಧಿವೇಶನದಲ್ಲಿ ಮಂಡನೆಯಾಗಿ ಅಂಗೀಕಾರಕ್ಕೆ ಬಾಕಿ ಇರುವ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ತಿದ್ದುಪಡಿ ವಿಧೇಯಕ 2018ಅನ್ನು ಮಂಡನೆ ಮಾಡಲಾಗುವುದು ಎಂದು ಹೇಳಿದರು. ಒಟ್ಟು 25 ದಿನಗಳ ಕಾಲ ನಡೆಯಲಿರುವ ಕಲಾಪದಲ್ಲಿ ಸದನದ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ರಾಜ್ಯದ ಪ್ರಚಲಿತ ಸಮಸ್ಯೆಗಳ ಚರ್ಚೆ ಹಾಗೂ ಜನರ ಆಶಯಗಳಿಗೆ ತಕ್ಕಂತೆ ನಡೆಸಿ ಸರ್ಕಾರಕ್ಕೆ ನಿಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಬೇಕೆಂದು ಸ್ಪೀಕರ್ ಮನವಿ ಮಾಡಿದರು.

ಶಾಸನ ಸಭೆಯ ವಿಧೇಯಕಗಳಲ್ಲಿ ಸದಸ್ಯರೆಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಪರಸ್ಪರ ಚರ್ಚೆ ನಡೆಸುವ ಮೂಲಕ ಸರ್ಕಾರಕ್ಕೆ ಸಲಹೆಗಳನ್ನು ಕೊಡಿ. ಅನಗತ್ಯವಾಗಿ ಸಮಯ ವ್ಯರ್ಥ ಮಾಡುವ ಬದಲು ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ಮಾಡಿದರು.

#ಸಂವಿಧಾನದ ಬಗ್ಗೆ ಚರ್ಚೆ: ಸಂವಿಧಾನದ ಆಶಯ, ಮೂಲ ಮತ್ತು ಅದರ ಸದುದ್ದೇಶವನ್ನು ಎಲ್ಲಾ ಸದಸ್ಯರಿಗೂ ತಿಳಿಯ ಪಡಿಸುವುದಕ್ಕಾಗಿ ಮಾ.2 ಮತ್ತು 3ರಿಂದ ಸಂವಿಧಾನ ಕುರಿತ ಚರ್ಚೆ ನಡೆಯಲಿದೆ. ಈ ಎರಡು ದಿನಗಳಲ್ಲಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ರಾಜಕೀಯ ಹೊರತು ಪಡಿಸಿ ಸಂವಿಧಾನ ಸ್ಥಾಪನೆ, ಅದರ ಉದ್ದೇಶ, ಮಹತ್ವ ಕುರಿತಂತೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ಪೀಕರ್ ಮನವಿ ಮಾಡಿದರು.

ನ.26ರಂದೇ ಎರಡು ಸಂವಿಧಾನ ಕುರಿತಂತೆ ಚರ್ಚೆ ಮಾಡಲು ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿತ್ತು. ಹಾಗಾಗಿ ಅಧಿವೇಶನ ಮುಂದೂಡಲಾಗಿತ್ತು. ಮಾ.2 ಮತ್ತು 3ರಂದು ನಡೆಯಲಿರುವ ಚರ್ಚೆಯಲ್ಲಿ ಸಂವಿಧಾನ ಕುರಿತು ಎಲ್ಲರೂ ಮಾತನಾಡಬೇಕು. ಇದು ಪಕ್ಷಾತೀತವಾಗಿರಲಿ ಎಂದು ಸ್ಪೀಕರ್ ಆಶಯ ವ್ಯಕ್ತಪಡಿಸಿದರು.

# ನೇರಪ್ರಸಾರಕ್ಕೆ ಕಡಿವಾಣ :
ಲೋಕಸಭೆ ಹಾಗೂ ರಾಜ್ಯಸಭೆಗೆ ಇರುವ ಮಾದರಿಯಲ್ಲೇ ಈ ಬಾರಿಯೂ ವಿಧಾನಸಭಾ ಕಲಾಪಗಳನ್ನು ನೇರಪ್ರಸಾರ ಮಾಡಲು ವರದಿಗಾರರಿಗೆ ಸದನದ ಒಳಗೆ ಪರೋಕ್ಷವಾಗಿ ಕಡಿವಾಣ ಹಾಕಲಾಗಿದೆ. ಅಂದರೆ ಕಳೆದ ಬಾರಿಯಂತೆ ಈ ಬಾರಿಯೂ ಕಲಾಪವನ್ನುಸದನದ ಹೊರಗಿನಿಂದಲೇ ವರದಿ ಮಾಡಬೇಕಾಗುತ್ತದೆ. ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಧಾನ ಜಾರಿಯಲ್ಲಿದೆ.ಇದೇ ವಿಧಾನವನ್ನು ಬೇರೆ, ಬೇರೆ ರಾಜ್ಯಗಳಲ್ಲೂ ಅಳವಡಿಸಿಕೊಂಡಿವೆ.

ಇದೇ ಮಾದರಿಯನ್ನು ಕರ್ನಾಟಕ ಕೂಡ ಅನುಸರಿಸಲಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ನಾವು ಮಾಧ್ಯಮಗಳಿಗೆ ನಿರ್ಬಂಧ ಹಾಕುತ್ತಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಕ್ಕೆ ಅದರದೇ ಆದ ಸ್ವಾತಂತ್ರವಿದೆ. ಲೋಕಸಭೆ-ರಾಜ್ಯಸಭೆಯಲ್ಲಿರುವಂತೆ ಈ ವ್ಯವಸ್ಥೆಯನ್ನು ನಾವು ಕೂಡ ಅಳವಡಿಸಿಕೊಂಡಿದ್ದೇವೆ ಎಂದು ಕಾಗೇರಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

Facebook Comments