ಅಪಘಾತದಲ್ಲಿ ಪತ್ರಕರ್ತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಆ.12- ಎದುರಿನಿಂದ ವೇಗವಾಗಿ ಬಂದ ಬೈಕ್‍ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕೆಳಗೆ ಬಿದ್ದ ಪರಿಣಾಮ ಪತ್ರಕರ್ತರೊಬ್ಬರು ಸಾವನ್ನಪ್ಪಿರುವ ಘಟನೆ ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಜೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಪುಟ ವಿನ್ಯಾಸಗಾರರಾಗಿ ಕೆಲಸ ಮಾಡುತ್ತಿದ್ದ ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ರೌಡಿಹಳ್ಳಿ ನಿವಾಸಿ ಪುನೀತ್ (37) ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ.

ರಾತ್ರಿ 10 ಗಂಟೆಗೆ ಪತ್ರಿಕಾ ಕಚೇರಿಯ ಕೆಲಸ ಮುಗಿಸಿದ ಪುನೀತ್ ತನ್ನ ಸಂಬಂಧಿ ಶಂಕರ್ ಎಂಬುವರೊಂದಿಗೆ ಬೈಕ್‍ನಲ್ಲಿ ತಮ್ಮ ಹುಟ್ಟೂರಾದ ಮಧುಗಿರಿಗೆ ತೆರಳುತ್ತಿದ್ದರು. ರಾತ್ರಿ 12.30ರ ಸಮಯದಲ್ಲಿ ತುಮಕೂರಿಗೆ ಆಗಮಿಸಿದ ಅಲ್ಲಿಂದ ಎಸ್‍ಎಸ್ ಪುರಂ ರಸ್ತೆಯ ಮೂಲಕ ಮಧುಗಿರಿಗೆ ತೆರಳುತ್ತಿದ್ದಾಗ ನಮ್ಮೂರ ಆಹಾರ ಹೊಟೇಲ್ ಮುಂಭಾಗ ಎದುರಿನಿಂದ ವೇಗವಾಗಿ ಬಂದ ಬೈಕ್‍ನ ಬೆಳಕು ಪುನೀತ್ ಕಣ್ಣಿಗೆ ರಾಚಿದಾಗ ರಸ್ತೆ ಉಬ್ಬು ಕಾಣದೆ ಅವರು ಸಂಚರಿಸುತ್ತಿದ್ದ ಬೈಕ್ ಆಯ ತಪ್ಪಿ ಉರುಳಿ ಬಿತ್ತು.

ಬೈಕ್ ಬಿದ್ದ ರಭಸಕ್ಕೆ ಪುನೀತ್ ಅವರ ತಲೆಗೆ ತೀವ್ರ ಪೆಟ್ಟಾಯಿತು. ಹಿಂಬದಿ ಸವಾರ ಶಂಕರನಿಗೂ ಸಣ್ಣ ಪುಟ್ಟ ಗಾಯವಾಯಿತು. ತಕ್ಷಣ ಸಾವರಿಸಿಕೊಂಡ ಶಂಕರ್ ಸ್ಥಳೀಯರ ಸಹಾಯದಿಂದ ತೀವ್ರವಾಗಿ ಪೆಟ್ಟಾಗಿದ್ದ ಪುನೀತಂ ಅವರನ್ನು ಆಟೋದಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಪುನೀತ್ ಮೃತಪಟ್ಟಿದ್ದಾರೆ ಎಂದು ಹೊಸ ಬಡಾವಣೆ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ತಿಲಕ್ ಪಾರ್ಕ್ ಸರ್ಕಲ್ ಇನ್ಸ್‍ಪೆಕ್ಟರ್ ಪಾರ್ವತಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin