ಮುಚ್ಚಳಿಕೆ-ಜಾಮೀನು ಉಲ್ಲಂಘನೆ : ಆರೋಪಿ ನ್ಯಾಯಾಂಗ ಬಂಧನಕ್ಕೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ. 15- ನಗರದಲ್ಲಿಯೇ ಪ್ರಪ್ರಥಮವಾಗಿ ಭದ್ರತಾ ಕಾಯ್ದೆಯ ವೈಯಕ್ತಿಕ ಮುಚ್ಚಳಿಕೆ ಹಾಗೂ ಜಾಮೀನು ಉಲ್ಲಂಘಿಸಿದ ಆರೋಪಿ ಜಬೀ ಎಂಬಾತನನ್ನು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು ಮತ್ತು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು ಆ.6ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ವೈಯಕ್ತಿಕ ಮುಚ್ಚಳಿಕೆಯನ್ನು ಉಲ್ಲಂಘಿಸಿರುವವರನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದು ಇದೇ ಪ್ರಪ್ರಥಮ ಪ್ರಕರಣವಾಗಿರುತ್ತದೆ.

ಪ್ರಕರಣ ಹಿನ್ನೆಲೆ:
ಡಿಜೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಜಬೀ ಅಲಿಯಾಸ್ ಜಬೀವುಲ್ಲಾ (25) ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗವುಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಹಾಗೂ ಸಾರ್ವಜನಿಕ ಆಸ್ತಿ, ಪಾಸ್ತಿಗೆ ಹಾನಿವುಂಟು ಮಾಡುತ್ತಿದ್ದನು. ಈತನ ವಿರುದ್ಧ ಕಳೆದ ಆ. 6 ರಂದು ಡಿಜೆಹಳ್ಳಿ ಠಾಣೆಯಲ್ಲಿ ಭದ್ರತಾ ಪ್ರಕರಣ ದಾಖಲಿಸಿದ್ದು, 1 ವರ್ಷದ ಅವಧಿಗೆ ವೈಯಕ್ತಿಕ ಮುಚ್ಚಳಿಕೆ ಹಾಗೂ 1 ಲಕ್ಷ ರೂ. ಶೂರಿಟಿಯನ್ನು ನೀಡಿದ್ದರು.

ಅದರಂತೆ ಮುಚ್ಚಳಿಕೆಯ ಜಾರಿಯಿರುವ ಅವಧಿಯಲ್ಲಿ ಯಾವುದೇ ರೀತಿಯ ಅಪರಾಧ ಎಸಗುವುದಿಲ್ಲ, ಸಾರ್ವಜನಿಕರ ಶಾಂತಿಗೆ ಧಕ್ಕೆ ತರುವುದಿಲ್ಲವೆಂದು, ಸಮಾಜದ ಸ್ವಾಸ್ಥಕ್ಕೆ ಗಂಡಾಂತರಕಾರಿಯಾಗದೇ ಸದ್ವರ್ತನೆಯಿಂದ ಇರಬೇಕೆಂದು ಆದೇಶಿಸಿ ವೈಯಕ್ತಿಕ ಮುಚ್ಚಳಿಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

# ಮುಚ್ಚಳಿಕೆ ಉಲ್ಲಂಘನೆ:
ಜಾಮೀನಿನ ಮೇಲೆ ಹೊರಬಂದ ನಂತರ ಆರೋಪಿ ಜಬೀ ಕಳೆದ ಸೆ. 8 ರಂದು ಡಿಜೆಹಳ್ಳಿ ವ್ಯಾಪ್ತಿಯ ಅಮವಾಸೆ ಲೈನ್‍ನಲ್ಲಿ ಸಂಜೆ 5.30ರಲ್ಲಿ ಅಜಿತ್‍ಕುಮಾರ್ ಎಂಬಾತನ ಜೊತೆ ಗಲಾಟೆ ಮಾಡಿಕೊಂಡು ಅವಾಚ್ಯ ಶಬ್ದದಿಂದ ನಿಂದಿಸಿ, ಚಾಕುವಿನಿಂದ ತಲೆ, ಮುಖಕ್ಕೆ ಮೂರು ಬಾರಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದನು. ಘಟನೆ ಸಂಬಂಧ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ನಂತರ ನ್ಯಾಯಾಲಯದ ಜಾಮೀನಿನ ಮೇಲೆ ಹೊರ ಬಂದಿರುತ್ತಾನೆ.

# ನ್ಯಾಯಾಂಗ ಬಂಧನಕ್ಕೆ ಆದೇಶ:
ಆರೋಪಿ ಜಬೀ ಮುಚ್ಚಳಿಕೆ ಷರತ್ತುಗಳಿಗೆ ಒಳಪಟ್ಟವನೆಂದು ತಿಳಿದಿದ್ದರೂ ಸಹ ಷರತ್ತುಗಳನ್ನು ಉಲ್ಲಂಘಿಸಿ ಅಪರಾಧಿತ ಕೃತ್ಯದಲ್ಲಿ ತೊಡಗಿ ದುವರ್ತನೆ ತೋರಿರುವುದರಿಂದ ಈ ಪ್ರಕರಣದಲ್ಲಿ ವೈಯಕ್ತಿಕ ಮಚ್ಚಳಿಕೆ ಆದ ಬಗ್ಗೆ ಪ್ರಕ್ರಿಯೆ ಆರಂಭಿಸಿ, ಆ ಪ್ರಕಾರ ಮುಚ್ಚಳಿಕೆಯ ಉಳಿದ ಅವಧಿಗೆ ಆತನನ್ನು ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕ ಶಾಂತಿ
ಸುವ್ಯವಸ್ಥೆಗೆ ಗಂಡಾಂತರಕಾರಿಯಾಗಿ ಪರಿಣಮಿಸುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.

ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು ಮತ್ತು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು ಮುಚ್ಚಳಿಕೆಯ ಮೊತ್ತ 1 ಲಕ್ಷ ಹಣವನ್ನು ಮೂರು ದಿನಗಳಲ್ಲಿ ಪಾವತಿಸಲು ಆದೇಶಿಸಿದ್ದಾರೆ. ಮುಚ್ಚಳಿಕೆಯ ಉಳಿದ ಅವಧಿಗೆ ಅಂದರೆ ಮುಂದಿನ ಆ.6ರವರೆಗೆ ಆರೋಪಿ ಜಬೀನನ್ನು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿರುತ್ತಾರೆ.

Facebook Comments