BIG NEWS: ಬೊಕ್ಕಸಕ್ಕೆ ಹೊರೆ, ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಗೊಳಿಸಿ ಸರ್ಕಾರ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆಯಾಗುತ್ತಿರುವ ಹಿನ್ನೆಲೆ, ಶಕ್ತಿಕೇಂದ್ರದಲ್ಲಿರುವ ಸುಮಾರು 542 ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.  ಪ್ರತಿಯೊಂದು ಇಲಾಖೆಯಲ್ಲಿ ಹೆಚ್ಚುವರಿಯಾಗಿ 2ರಿಂದ 3 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು, ಸರ್ಕಾರಕ್ಕೆ ಪ್ರತಿ ತಿಂಗಳು ಕನಿಷ್ಠವೆಂದರೆ 2 ಕೋಟಿ ಹೊರೆಯಾಗುತ್ತದೆ.

ಯಾವ ಇಲಾಖೆಗಳಲ್ಲಿ ಹೆಚ್ಚುವರಿಯಾಗಿ ಅನಗತ್ಯ ಸಿಬ್ಬಂದಿಗಳಿದ್ದಾರೋ ಅವರನ್ನು ಪುನಃ ಮಾತೃ ಇಲಾಖೆಗೆ ನಿಯೋಜನೆ ಮಾಡುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ(ಡಿಪಿಎಆರ್) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.  ಪ್ರಸ್ತುತ ವಿಧಾನಸೌಧ, ವಿಕಾಸಸೌಧ ಹಾಗೂ ಎಂಎಸ್ ಬಹುಮಹಡಿ ಕಟ್ಟಡದಲ್ಲಿ ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಹಾಲಿ 3000 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದರಲ್ಲಿ ಪ್ರಮುಖವಾಗಿ ಹಣಕಾಸು, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಬೃಹತ್ ನೀರಾವರಿ, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮುಖ್ಯಮಂತ್ರಿಗಳ ಕಾರ್ಯಾಲಯ ಸೇರಿದಂತೆ ಮತ್ತಿತರ ಕಡೆ ಹೆಚ್ಚುವರಿಯಾಗಿ ನಿಯೋಜನೆಗೊಂಡಿದ್ದಾರೆ.
ಈ ಹುದ್ದೆಗಳು ಅನಗತ್ಯವಾಗಿದ್ದು ಜೊತೆಗೆ ಕೆಲವು ಕಡೆ 2-3 ಮಂದಿ ನೌಕರರು ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇಂತಹ ಅನಗತ್ಯ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ನಿಯೋಜನೆ ಮಾಡಬೇಕೆಂದು ಡಿಪಿಎಆರ್‍ನ ಹಿರಿಯ ಅಧಿಕಾರಿಯೊಬ್ಬರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.   ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಒಂದೇ ಹುದ್ದೆಯಲ್ಲಿರುವ ಹೆಚ್ಚುವರಿ ಸಿಬ್ಬಂದಿಯನ್ನು ರದ್ದುಪಡಿಸಿ ಮಾತೃ ಇಲಾಖೆಗೆ ವರ್ಗಾವಣೆ ಮಾಡಲು ಸಜ್ಜಾಗಿದೆ.

ಸಚಿವಾಲಯದಲ್ಲಿರುವ 542 ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಉದ್ದೇಶಪೂರ್ವಕವಾಗಿ ಕೆಲವರು ಸರ್ಕಾರದ ಕಡತಗಳನ್ನು ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಈ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ನಿಯೋಜನೆ ಮಾಡುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದ ಸಮಿತಿಯು ಆರ್ಥಿಕ ಶಿಸ್ತು ತರುವ ಸದುದ್ದೇಶದಿಂದ ಸಣ್ಣ ಇಲಾಖೆಗಳನ್ನು ವಿಲೀನಗೊಳಿಸುವುದು ಹಾಗೂ ಹೆಚ್ಚುವರಿ ಹುದ್ದೆಗಳನ್ನು ತೆಗೆದು ಹಾಕಬೇಕು. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವ ಹುದ್ದೆಗಳನ್ನು ರದ್ದುಪಡಿಸಿ ಯಾವ ಇಲಾಖೆಗೆ ಎಷ್ಟು ಸಿಬ್ಬಂದಿ ಅಗತ್ಯವಿದೆಯೋ ಅಷ್ಟನ್ನು ಮಾತ್ರ ನೇಮಿಸಿಕೊಳ್ಳಬೇಕು. ಅನಗತ್ಯವಾಗಿ ಸಿಬ್ಬಂದಿ ನಿಯೋಜನೆ ಮಾಡಬಾರದು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಇದೀಗ ಸರ್ಕಾರ ವರದಿಯನ್ನು ಅನುಷ್ಠಾನ ಮಾಡುವ ಮೂಲಕ ಶಕ್ತಿಕೇಂದ್ರದಲ್ಲಿ ಬೀಡುಬಿಟ್ಟಿರುವ ಕಿರಿಯ ಸಹಾಯಕರನ್ನು ಎತ್ತಂಗಡಿ ಮಾಡಲು ಸಜ್ಜಾಗಿದೆ.

#2 ಕೋಟಿ ಉಳಿತಾಯ:
ಹೆಚ್ಚುವರಿ ಸಿಬ್ಬಂದಿ ಹುದ್ದೆ ರದ್ದುಗೊಳಿಸುವುದರಿಂದ ಪ್ರತಿ ತಿಂಗಳು ಕನಿಷ್ಟ 1.8 ಕೋಟಿಯಿಂದ 2 ಕೋಟಿವರೆಗೂ ಬೊಕ್ಕಸಕ್ಕೆ ಉಳಿತಾಯವಾಗಲಿದೆ. ಪ್ರತಿ ಸಿಬ್ಬಂದಿ ಕನಿಷ್ಠ 25ರಿಂದ 40 ಸಾವಿರದವರೆಗೂ ವೇತನ ಪಡೆಯುತ್ತಿದ್ದಾರೆ.  ಒಂದೇ ಇಲಾಖೆಯಲ್ಲಿ ಇಬ್ಬರಿಂದ ಮೂರು ಸಿಬ್ಬಂದಿ ನಿಯೋಜನೆಗೊಂಡ ಪರಿಣಾಮ ಆರ್ಥಿಕ ಇಲಾಖೆಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಈ ಎಲ್ಲ ಸಾಧಕ-ಬಾಧಕಗಳ ಬಗ್ಗೆ ಈಗಾಗಲೇ ಸರ್ಕಾರ ಚರ್ಚೆ ಮಾಡಿದ್ದು, ಅನಗತ್ಯವಾಗಿ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಶಕ್ತಿಕೇಂದ್ರಗಳಿಂದ ಖಾಲಿ ಮಾಡಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಹಿಂದೆ ರಾಜ್ಯ ಸರ್ಕಾರ 14 ಮಂದಿ ಅೀನ ಕಾರ್ಯದರ್ಶಿ ಹುದ್ದೆಗಳನ್ನು ರದ್ದುಪಡಿಸಿತ್ತು.

Facebook Comments