ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ ಗಲಭೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.19- ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗುಂಪು ಗಲಭೆ ಪ್ರಕರಣದಲ್ಲಿ ನಷ್ಟ ಅನುಭವಿಸಿದವರು ತಮ್ಮ ಆಸ್ತಿಯ ಮಾಹಿತಿಗಳ ಜತೆ ನಷ್ಟಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಂತೆ ಎಚ್.ಎಸ್.ಕೆಂಪಣ್ಣ ಆಯೋಗ ಮನವಿ ಮಾಡಿದೆ. ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರು ಇಂದು ಬಾಲಬ್ರೂಯಿ ಅತಿಥಿಗೃಹದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಾರ್ವಜನಿಕರು ನಷ್ಟ ಪರಿಹಾರಕ್ಕಾಗಿ ಆಯೋಗದ ಮುಂದೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.

ಕಳೆದ ವರ್ಷ ಆಗಸ್ಟ್ 11ರಂದು ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರದೇಶಗಳಲ್ಲಿ ಗುಂಪು ಗಲಭೆಯಾಗಿತ್ತು. ಸಾರ್ವಜನಿಕರ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ. ಆ ಆಸ್ತಿ ನಷ್ಟವನ್ನು ತಪ್ಪಿತಸ್ಥ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ವಸೂಲಿ ಮಾಡಿ ನಷ್ಟ ಭರಿಸಿಕೊಡುವಂತೆ ಸಲ್ಲಿಸಲಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ರಾಜ್ಯಹೈಕೋರ್ಟ್, ಸುಪ್ರೀಂಕೋರ್ಟ್‍ನ ಮಾರ್ಗಸೂಚಿಗಳ ಅನ್ವಯ ಕ್ಲೇಮ್ ಕಮೀಷನರ್‍ಗಳನ್ನಾಗಿ ತಮ್ಮನ್ನು ನೇಮಿಸಿದೆ. ತಾವು ನಷ್ಟಕ್ಕೊಳಗಾದವರು ದಾಖಲೆಗಳ ಸಹಿತ ಸಲ್ಲಿಸುವ ಅರ್ಜಿಗಳನ್ನು ಪರಿಶೀಲನೆ ಮಾಡಿ ಮೌಲ್ಯ ಮಾಪಕರುಗಳಿಂದ ನಷ್ಟದ ಅಂದಾಜು ಮಾಡಿಸಿ ಹೈಕೋರ್ಟ್‍ಗೆ ವರದಿ ಸಲ್ಲಿಸುತ್ತೇವೆ.

ಹೈಕೋರ್ಟ್ ವಿಚಾರಣೆ ನಡೆಸಿ ಗಲಭೆ ಕಾರಣರಾದ ತಪ್ಪಿತಸ್ಥರು ಹಾಗೂ ಸಂಸ್ಥೆಗಳವರ ಆಸ್ತಿಗಳನ್ನು ಜಪ್ತಿ ಮಾಡಿ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಿಸುವ ಆದೇಶ ಮಾಡಲಿದೆ ಎಂದು ತಿಳಿಸಿದರು. ಈವರೆಗೂ ತಮ್ಮ ಆಯೋಗದ ಮುಂದೆ ಕೇವಲ ಮೂರು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ 50ಕ್ಕೂ ಹೆಚ್ಚು ಮಂದಿ ಆಸ್ತಿಪಾಸ್ತಿ ಕಳೆದುಕೊಂಡಿರುವ ಉದಾಹರಣೆ ಇದೆ.

ಆದರೆ, ಆಯೋಗದ ಮುಂದೆ ಅಧಿಕೃತವಾಗಿ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಕಡಿಮೆ ಇದೆ. ಬಹುಶಃ ಮಾಹಿತಿಯ ಕೊರತೆ ಇರಬಹುದು ಎಂದು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ. ಈ ಎರಡು ಪ್ರದೇಶಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದೆ. ಸಾಕಷ್ಟು ಪ್ರಚಾರ ಮಾಡಲಾಗಿದೆ. ಇನ್ನು ಮುಂದೆಯಾದರೂ ನಷ್ಟಕ್ಕೊಳಗಾದವರು ಆಯೋಗದ ಮುಂದೆ ಅರ್ಜಿ ಸಲ್ಲಿಸಿದರೆ ಸೂಕ್ತ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಫೆ.28 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆದರೆ, ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂಬ ಕಾರಣಕ್ಕಾಗಿ ಅವಧಿ ಮುಗಿದ ಬಳಿಕ ಬಂದ ಅರ್ಜಿಗಳನ್ನು ಕೂಡ ಪರಿಶೀಲನೆ ಮಾಡುತ್ತೇವೆ ಎಂದು ಕೆಂಪಣ್ಣ ಹೇಳಿದರು. ಅರ್ಜಿದಾರರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ, ಆಡಿಯೋ, ವೀಡಿಯೋ ದಾಖಲಾತಿಗಳಿದ್ದರೆ ಅವುಗಳ ಜತೆಯಾಗಿ ಸಾಕ್ಷಿಗಳನ್ನು ದೃಢಪಡಿಸುವ ಹೇಳಿಕೆಯೊಂದಿಗೆ ನಷ್ಟಕ್ಕೊಳಗಾದ ಆಸ್ತಿಯ ಮೌಲ್ಯವನ್ನು ಸೇರಿಸಿ ಅರ್ಜಿ ಸಲ್ಲಿಸುವಂತೆ ಅವರು ಮನವಿ ಮಾಡಿದರು.

ಈ ಹಿಂದೆ ತೆಲಂಗಾಣ ರಾಜ್ಯದ ಪ್ರತ್ಯೇಕ ರಾಜ್ಯ ಹೋರಾಟದ ವೇಳೆ ಗಲಭೆ, ದೊಂಬಿ, ಗಲಾಟೆಗಳಾಗಿದ್ದವು, ಆಸ್ತಿ ನಷ್ಟವಾಗಿತ್ತು, ಸ್ವಯಂ ಪ್ರೇರಿತ ದೂರು ದಾಖಲಿಸಿದ್ದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಕಾಮತ್ ಮತ್ತು ಹಿರಿಯ ವಕೀಲ ಪಾಲಿ ಎಸ್.ನಾರಿಮನ್ ಅವರ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ರಚಿಸಿತ್ತು. ಸಮಿತಿಗಳ ವರದಿ ಆಧರಿಸಿ ಸುಪ್ರೀಂಕೋರ್ಟ್ 10 ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರ ಪ್ರಕಾರ ನಷ್ಟ ಪರಿಹಾರ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.

Facebook Comments