ನ್ಯಾಯಮೂರ್ತಿಗಳು ನಿರ್ಭೀತಿಯಿಂದ ಇರಬೇಕು : ಜಗನ್‍ಗೆ ನ್ಯಾ. ರಮಣ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.18- ದೇಶದ ನಾಲ್ಕು ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗ ನ್ಯಾಯಾಂಗ ವ್ಯವಸ್ಥೆ ಮೇಲೆ ಜನರಿಗೆ ದೊಡ್ಡ ನಂಬಿಕೆ ಇದೆ. ಈ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ನ್ಯಾಯಾಧೀಶರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಬೇಕು.

ತೀರ್ಪು ನೀಡುವಾಗ ಭಯ ಪಡುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‍ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬಡೆ ಅವರಿಗೆ ಪತ್ರ ಬರೆದಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್‍ರೆಡ್ಡಿ ಅವರಿಗೆ ತಿರುಗೇಟು ನೀಡಿದ್ದಾರೆ.

ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ಇಡೀ ದೇಶದ ಜನತೆಗೆ ತುಂಬಾ ಗೌರವ, ನಂಬಿಕೆ ಮತ್ತು ವಿಶ್ವಾಸವಿದೆ. ಇದಕ್ಕೆ ಚ್ಯುತಿ ಬಾರದಂತೆ ನ್ಯಾಯಾಧೀಶರು ನಡೆದುಕೊಳ್ಳಬೇಕು. ತೀರ್ಪು ನೀಡುವಾಗ ನಿರ್ಭೀತಿಯಿಂದ ನ್ಯಾಯ ನಿರ್ಣಯ ಮಾಡಬೇಕು. ಈ ವಿಷಯದಲ್ಲಿ ಯಾವುದೇ ರಾಜಿ-ಸಂಧಾನ ಇರಬಾರದು ಎಂದು ದೇಶದ ನ್ಯಾಯಾಧೀಶರಿಗೆ ಅವರು ಕರೆ ನೀಡಿದರು.

ಇತ್ತೀಚೆಗೆ ನಿಧನರಾದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ.ಲಕ್ಷ್ಮಣನ್ ಅವರ ಗೌರವಾರ್ಥ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿ, ದೇಶದ ನ್ಯಾಯಾಧೀಶರು ಮತ್ತು ಕಾನೂನು ಪಾಲಕರಿಗೆ ಕರೆ ನೀಡುವ ಜತೆಗೆ ತಮ್ಮ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಆಂಧ್ರ ಮುಖ್ಯಮಂತ್ರಿಗೆ ತೀಕ್ಷ್ಣ ಮಾತುಗಳ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಸತ್ಯವನ್ನು ಮತ್ತು ವಾಸ್ತವ ಸಂಗತಿಯನ್ನು ಬದಲಿಸಲು ಎಂದಿಗೂ ಸಾಧ್ಯವಿಲ್ಲ. ಅದೇ ರೀತಿ ನಂಬಿಕೆ, ವಿಶ್ವಾಸ ಮತ್ತು ನ್ಯಾಯ ನಿರ್ಣಯವನ್ನು ಬದಲಿಸಲಾಗದು. ಇವೆಲ್ಲವನ್ನೂ ನಾವು ಗಮನದಲ್ಲಿಟ್ಟುಕೊಂಡು ನ್ಯಾಯಾಂಗ ವ್ಯವಸ್ಥೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಜನರು ನ್ಯಾಯಾಂಗದ ಮೇಲೆ ಬಹಳ ನಂಬಿಕೆ ಇಟ್ಟಿದ್ದಾರೆ. ಅವರ ವಿಶ್ವಾಸವನ್ನು ನಾವು ಎಂದಿಗೂ ಉಳಿಸಿಕೊಳ್ಳಬೇಕು. ಹೀಗಾಗಿ ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಎಲ್ಲ ಕಾನೂನು ಪಾಲಕರು ಯಾವುದೇ ನಿರ್ಧಾರ ಕೈಗೊಳ್ಳುವಾಗ, ತೀರ್ಪು ನೀಡುವಾಗ, ನ್ಯಾಯ ನಿರ್ಣಯಿಸುವಾಗ ಅಂಜಿಕೆಗೆ ಒಳಗಾಗಬೇಕಿಲ್ಲ. ನಿರ್ಭೀತಿಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ತಮ್ಮ ವಿರುದ್ಧ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಆಂಧ್ರ ಸಿಎಂ ಜಗನ್‍ಮೋಹನ್‍ರೆಡ್ಡಿ ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬಡೆ ಅವರಿಗೆ ಪತ್ರ ಬರೆದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಆಂಧ್ರದ ರಾಜ್ಯ ಮುಖ್ಯಸ್ಥರಿಗೆ ತೀಕ್ಷ್ಣ ಮಾತುಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Facebook Comments