ಸರ್ವೋಚ್ಛ ನ್ಯಾಯಾಲಯದ 47ನೇ ಸಿಜೆಐ ಆಗಿ ಅರವಿಂದ್ ಬೋಬ್ಡೆ ಪ್ರಮಾಣ
ನವದೆಹಲಿ,ನ.18- ದೇಶದ ಸರ್ವೋಚ್ಛ ನ್ಯಾಯಾಲಯದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಶರತ್ ಅರವಿಂದ್ ಬೋಬ್ಡೆ (ಎಸ್.ಎ.ಬೊಬ್ಡೆ) ಅವರು ಇಂದು ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನೂತನ ಮುಖ್ಯ ನ್ಯಾಯಮೂರ್ತಿಗೆ ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧಿಕಾರ ಗೌಪ್ಯತೆ ಬೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ವಿವಿಧ ಪಕ್ಷಗಳ ಮುಖಂಡರು, ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳು ಈ ವೇಳೆ ಭಾಗವಹಿಸಿದ್ದರು. ಮೂಲತಃ ಮಹಾರಾಷ್ಟ್ರದ ನಾಗಪುರದವರಾದ ಎಸ್.ಎ.ಬೋಬ್ಡೆ ಅವರು ನಿನ್ನೆಯಷ್ಟೇ ನಿವೃತ್ತಿಯಾದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರ ಸ್ಥಾನವನ್ನು ತುಂಬಲಿದ್ದಾರೆ.
ಸಾಮಾನ್ಯವಾಗಿ ಹಾಲಿ ಮುಖ್ಯ ನ್ಯಾಯಮೂರ್ತಿಗಳೇ ಸುಪ್ರೀಂಕೋರ್ಟ್ಗೆ ಮುಂದಿನ ಮುಖ್ಯ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸ್ಸು ಮಾಡುವುದು ವಾಡಿಕೆಯಾಗಿತ್ತು. ಅದರಂತೆ 15 ದಿನಗಳ ಹಿಂದೆಯೇ ರಂಜನ್ ಗೋಗೊಯ್ ಬೊಬ್ಡೆ ಅವರ ಹೆಸರನ್ನು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದರು.
ಎಸ್.ಎ.ಬೋಬ್ಡೆ ಅವರು ಈ ಹಿಂದೆ ಹಲವಾರು ಪ್ರಮುಖ ತೀರ್ಪುಗಳನ್ನು ನೀಡಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಹೊರಬಿದ್ದ ವಿವಾದಾತ್ಮಕ ಅಯೋಧ್ಯೆಯ ಬಾಬ್ರಿಮಸೀದಿ-ರಾಮ ಜನ್ಮಭೂಮಿ ವಿವಾದ, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ಮಾಹಿತಿ ಹಕ್ಕು ಕಾಯ್ದೆಗೊಳಪಡಿಸಿದ್ದು ಸೇರಿದಂತೆ ಕೆಲವು ಮಹತ್ವದ ತೀರ್ಪುಗಳನ್ನು ನೀಡಿರುವ ಹೆಗ್ಗಳಿಕೆ ಅವರದ್ದು.
ನಾಗಪುರ ವಿವಿಯಲ್ಲಿ ಬಿಎ ಮತ್ತು ಎಲ್ಎಲ್ಬಿ ಪದವಿ ಪಡೆದ ಬೊಬ್ಡೆ 1978ರಲ್ಲಿ ಮಹಾರಾಷ್ಟ್ರ ಬಾರ್ ಕೌನ್ಸಿಲ್ನಲ್ಲಿ ಪ್ರವೇಶ ಪಡೆದರು. ನಂತರ ಬಾಂಬೆ ಹೈಕೋರ್ಟ್ನ ನಾಗಪುರ ಪೀಠದಲ್ಲಿ ಕಾನೂನು ಅಭ್ಯಾಸ ಮಾಡಿ 21 ವರ್ಷ ಸುಪ್ರೀಂಕೋರ್ಟ್ನಲ್ಲಿ ವಕೀಲ ಕೆಲಸ ಮಾಡಿರುವ ಅನುಭವವಿದೆ.
1998ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದ ಬೊಬ್ಡೆ ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದರು. 2012 ಅಕ್ಟೋಬರ್ 6ರಂದು ಮಧ್ಯಪ್ರದೇಶ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನಂತರ 2013 ಏ.21ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. 2021 ಏಪ್ರಿಲ್ 23ರಂದು ಬೊಬ್ಡೆ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿ ಹೊಂದಲಿದ್ದಾರೆ.