ಜ್ಯೋತಿನಿವಾಸ್ ಕಾಲೇಜಿನಲ್ಲಿ ರಾಜಕೀಯ ಹೈಡ್ರಾಮ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.9- ಸಿಎಎ ಮತ್ತು ಎನ್‍ಆರ್‍ಸಿ ಪರವಾಗಿ ಸಹಿ ಸಂಗ್ರಹಿಸಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಖಾಸಗಿ ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆದ ಕಾವೇರಿದ ಮಾತುಕತೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ನಿನ್ನೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ರಾಮಲಿಂಗಾ ರೆಡ್ಡಿ ಅವರು ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿಗೆ ಭೇಟಿ ನೀಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಗೃಹ ಸಚಿವ ಬಸವರಾಜ ಬೋಮ್ಮಾಯಿ ಅವರು ರಾಮಲಿಂಗಾ ರೆಡ್ಡಿ ಅವರಿಗೆ ಮಾಡಲು ಕೆಲಸ ಇಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಕಾಲೇಜು ಆವರಣದಲ್ಲಿ ರಾಜಕೀಯ ಮಾಡಲು ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಮಲಿಂಗಾ ರೆಡ್ಡಿ ಅವರು, ನನ್ನ ಕ್ಷೇತ್ರದಲ್ಲಿನ ಕಾಲೇಜಿನಲ್ಲಿ ಘಟನೆ ನಡೆದಿದೆ. ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಸುಮಾರು 5 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ಬಹುತೇಕರು ಬೇರೆಡೆಯಿಂದ ಬಂದಿದ್ದಾರೆ. ಪೋಷಕರಿಗೆ ಮಕ್ಕಳ ಬಗ್ಗೆ ಆತಂಕವಾಗಬಾರದು ಎಂಬ ಕಾರಣಕ್ಕೆ ಕಾಲೇಜಿಗೆ ಭೇಟಿ ನೀಡಿ ಧೈರ್ಯ ಹೇಳುವ ಪ್ರಯತ್ನ ಮಾಡಿದ್ದೇನೆ.

ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ಜವಾಬ್ದಾರಿತ ಸ್ಥಾನದಲ್ಲಿರುವ ಗೃಹ ಸಚಿವರು ಮಾತನಾಡುವಾಗ ಅಷ್ಟೇ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ದೇಶಾದ್ಯಂತ ಅಭಿಯಾನ ನಡೆಸುತ್ತಿದೆ. ನಿನ್ನೆ ಬಿಜೆಪಿ ಕಾರ್ಯಕರ್ತರು ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನ ಹೊರಭಾಗದಲ್ಲಿ ಬ್ಯಾನರ್ ಕಟ್ಟಿ ಸಿಎಎ ಹಾಗೂ ಎನ್‍ಆರ್‍ಸಿ ಬೆಂಬಲಿಸಿ ಸಹಿ ಸಂಗ್ರಹಿಸುತ್ತಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಕಾಲೇಜಿನ ವಿದ್ಯಾರ್ಥಿನಿಯರು, ಮಹಿಳಾ ಕಾಲೇಜು ಎದುರು ಈ ರೀತಿ ಬ್ಯಾನರ್ ಕಟ್ಟಿ ತೊಂದರೆ ನೀಡಬೇಡಿ ಎಂದು ಆಕ್ಷೇಪ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳ ಆಕ್ಷೇಪವನ್ನು ಬಿಜೆಪಿ ಕಾರ್ಯಕರ್ತರು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯ ಬಗ್ಗೆ ನಾನಾರೀತಿಯ ಚರ್ಚೆಗಳು ನಡೆದಿದ್ದವು. ಸ್ಥಳೀಯ ಶಾಸಕರಾದ ರಾಮಲಿಂಗಾ ರೆಡ್ಡಿ ಅವರು ಇಂದು ಬೆಳಗ್ಗೆ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಆಡಳಿತ ಮಂಡಳಿಯ ಜೊತೆ ಚರ್ಚೆ ನಡೆಸಿದ್ದರು.

ಗೃಹಕಚೇರಿ ಕೃಷ್ಣದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಘಟನೆಯ ಬಗ್ಗೆ ಯಾರು ಆತಂಕಗೊಳ್ಳುವ ಅಗತ್ಯ ಇಲ್ಲ. ಕಾಲೇಜಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟ ಪಡಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಗೃಹ ಸಚಿವ ಬಸವರಾಜ ಬೋಮ್ಮಾಯಿ ಅವರು, ಪರ ವಿರೋಧಗಳು ಏನೇ ಇರಲಿ. ಸರ್ಕಾರ ಎಲ್ಲರಿಗೂ ರಕ್ಷಣೆ ಒದಗಿಸುತ್ತದೆ. ಕರ್ನಾಟಕದಲ್ಲಿ ಮತ್ತೊಂದು ಜೆಎನ್‍ಯು ಸೃಷ್ಠಿಯಾಗಲು ಬಿಡುವುದಿಲ್ಲ ಎಂದರು. ಮಾಜಿ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಮಾಡಲು ಕೆಲಸ ಇಲ್ಲ. ಕಾಲೇಜಿನಲ್ಲಿ ರಾಜಕೀಯ ಮಾಡಲು ಹೋಗಿದ್ದಾರೆ ಎಂದು ಗೃಹ ಸಚಿವರು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ, ನಾನು ಹೋಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸಲು. ರಾಜಕೀಯ ಮಾಡಲು ಅಲ್ಲ. ಗೃಹ ಸಚಿವರಾಗಿ ಬಸವರಾಜ ಬೋಮ್ಮಾಯಿ ಅವರು ಜವಾಬ್ದಾರಿ ಮರೆತು ಮಾತನಾಡುತ್ತಿದ್ದಾರೆ. ರಾಜಕೀಯ ನಾನು ಮಾಡುತ್ತಿಲ್ಲ. ಬಿಜೆಪಿಯವರು ನಿನ್ನೆ ಕಾಲೇಜು ಬಳಿ ಹೋಗಿ ರಾಜಕಾರಣ ಮಾಡಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರು ನಡೆಸುವ ಅಭಿಯಾನಕ್ಕೆ ನಮ್ಮ ಯಾವ ವಿರೋಧವೂ ಇಲ್ಲ. ಆದರೆ, ಬಲವಂತ ಮಾಡುವುದು, ವಿದ್ಯಾರ್ಥಿಗಳಲ್ಲಿ ಭೀತಿ ಹುಟ್ಟಿಸುವುದು, ಕಾಲೇಜನ್ನು ಮುಚ್ಚಿಸುತ್ತೇವೆ ಎಂದು ಹೇಳುವ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಅದಕ್ಕೆ ಯಾವುದೇ ರೀತಿಯ ಅವಕಾಶ ಕೊಡುವುದಿಲ್ಲ ಎಂದರು. ಪ್ರತಿಷ್ಠಿತ ಕಾಲೇಜು ಇದಾಗಿದ್ದು, ಹೆಣ್ಣು ಮಕ್ಕಳು ಇಲ್ಲಿ ಓದುತ್ತಿದ್ದಾರೆ. ನಮ್ಮ ಮನೆಯ ಹೆಣ್ಣು ಮಕ್ಕಳಾಗಲಿ, ಯಾರ ಮಕ್ಕಳೇ ಆಗಲಿ ನಿರ್ಭೀತಿಯಿಂದ ಶಿಕ್ಷಣ ಪಡೆಯಬೇಕು. ಅನಗತ್ಯವಾಗಿ ಭಯದ ವಾತಾವರಣವನ್ನು ಸೃಷ್ಠಿಸಬಾರದು. ಇದನ್ನು ಯಾರೂ ಸಹಿಸುವುದಿಲ್ಲ ಎಂದರು.

ಅಭಿಯಾನದ ಹೆಸರಲ್ಲಿ ನಿನ್ನೆ ಇಲ್ಲಿ ಬಂದು ಗೊಂದಲ ಸೃಷ್ಠಿಸಿದ ಬಿಜೆಪಿಯ ಕಾರ್ಯಕರ್ತರು ನನಗೂ ಪರಿಚಯ ಇದ್ದಾರೆ. ಕಾಲೇಜು ಪ್ರಾಂಶುಪಾಲರ ಜೊತೆ ಮಾತನಾಡಿದಂತೆ ಬಿಜೆಪಿಯ ಕಾರ್ಯಕರ್ತರ ಜೊತೆಯೂ ಮಾತನಾಡಿದ್ದೇನೆ. ಕಾಲೇಜು ಆವರಣದಿಂದ ಹೊರಗೆ ನಿಮ್ಮ ಅಭಿಯಾನ ಮಾಡಿಕೊಳ್ಳಿ. ಬೇಕಿದ್ದರೆ ನಾನೇ ಪೆಂಡಾಲ್ ಹಾಕಿಸಿಕೊಡುತ್ತೇನೆ ಎಂದಿದ್ದೇನೆ. ಕಾಯ್ದೆ ಬಗ್ಗೆ ದೇಶಾದ್ಯಂತ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಬೆಂಬಲಿಸುವುದು, ಬಿಡುವುದು ಅವರ ವೈಯಕ್ತಿಕ ವಿಚಾರವಾಗಿರುತ್ತದೆ. ಯಾರೂ ಯಾರ ಮೇಲೆಯೂ ಒತ್ತಡ ಹೇರುವುದು ಸರಿಯಲ್ಲ ಎಂದು ಹೇಳಿದರು.

ನನ್ನ ಕ್ಷೇತ್ರದಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂಬ ವಿಶ್ವಾಸ ಇದೆ. ಕಾಲೇಜಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗೃಹ ಸಚಿವರೇ ಅನಗತ್ಯವಾಗಿ ವಿವಾದ ಸೃಷ್ಠಿಸುತ್ತಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತ ಪಡಿಸಿದರು.

Facebook Comments