ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವಿರೋಧ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.5- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಕೆ.ಸಿ.ರಾಮಮೂರ್ತಿ ಅವರು 2ನೇ ಬಾರಿಗೆ ರಾಜ್ಯಸಭೆಗೆ ಮರು ಆಯ್ಕೆಯಾದಂತಾಗಿದೆ.

ರಾಜ್ಯಸಭೆ ಚುನಾವಣೆಗೆ ಮೂವರು ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಸೂಚಕರಾಗಿ ಶಾಸಕರ್ಯಾರು ಸಹಿ ಹಾಕಿರದ ಹಿನ್ನೆಲೆಯಲ್ಲಿ ತಿರಸ್ಕøತಗೊಂಡಿದ್ದವು.  ಚುನಾವಣಾ ಕಣದಲ್ಲಿ ಕೆ.ಸಿ.ರಾಮಮೂರ್ತಿ ಅವರೊಬ್ಬರೇ ಉಳಿದಿದ್ದರು.

ನಾಮಪತ್ರ ವಾಪಸ್ ಪಡೆಯಲು ನಿಗದಿಪಡಿಸಿದ್ದ ಅಂತಿಮ ಸಮಯ ಮುಗಿದ ನಂತರ ಚುನಾವಣಾ ಅಧಿಕಾರಿಯೂ ಆಗಿರುವ ರಾಜ್ಯ ವಿಧಾನಸಭೆಯ ಚುನಾವಣಾ ಕಾರ್ಯದರ್ಶಿ(ಪ್ರ) ವಿಶಾಲಾಕ್ಷಿ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಪ್ರಕಟಿಸಿದರು. ಪ್ರಕಟಣೆಯ ನಂತರ ಚುನಾವಣಾಧಿಕಾರಿ ಅವರಿಂದ ಕೆ.ಸಿ.ರಾಮಮೂರ್ತಿ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.

ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾದ ಕೆ.ಸಿ.ರಾಮಮೂರ್ತಿ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದಿಸಿದ್ದಾರೆ.  ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚುವುದಲ್ಲದೆ ಬಿಜೆಪಿ ಇನ್ನಷ್ಟು ಬಲಿಷ್ಠಗೊಳ್ಳಲು ಪೂರಕವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರಾಜ್ಯ ಬಿಜೆಪಿ ಸಂಚಾಲಕ ಎ.ಎಚ್.ಆನಂದ್ ಕೂಡ ಅಭಿನಂದಿಸಿದರು.

ಎಲ್ಲರಿಗೂ ಧನ್ಯವಾದ : ರಾಜ್ಯಸಭೆಗೆ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ಕೆ.ಸಿ.ರಾಮಮೂರ್ತಿ ತಿಳಿಸಿದರು. ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಪ್ರಮಾಣ ಪತ್ರವನ್ನು ಚುನಾವಣಾ ಅಧಿಕಾರಿಯಿಂದ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರುಗಳಿಗೆ ಧನ್ಯ ಸಲ್ಲಿಸುವುದಾಗಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ ಕಾರ್ಯಕ್ರಮಗಳಿಂದಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ದೇಶಕ್ಕೆ ಇನ್ನಷ್ಟು ಉತ್ತಮ ಕೆಲಸ ಮಾಡುತ್ತೇವೆ. ಮೊದಲಿನಿಂದಲೂ ಬಿಜೆಪಿಯವರ ಜೊತೆ ಸ್ನೇಹವಿತ್ತು. ಈಗ ಅವರ ಜೊತೆಯಲ್ಲೇ ಕೆಲಸ ಮಾಡುತ್ತೇನೆ ಎಂದ ಅವರು, ರಾಜ್ಯದ ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು.

Facebook Comments

Sri Raghav

Admin