ಮೇ 23ರ ನಂತರ ದೇಶದ ರಾಜಕಾರಣದಲ್ಲಿ ಬದಲಾವಣೆ :ಕೆ.ಸಿ. ವೇಣುಗೋಪಾಲ

ಈ ಸುದ್ದಿಯನ್ನು ಶೇರ್ ಮಾಡಿ

ಕುಂದಗೋಳ,ಮೇ 13- ಸಚಿವ ದಿ. ಸಿ.ಎಸ್. ಶಿವಳ್ಳಿ ಅವರೊಬ್ಬ ಹುಟ್ಟು ಹೋರಾಟಗಾರರು ದೀನ ದಲಿತರ ಮತ್ತು ಬಡ ಜನತೆಯ ಕಷ್ಟಗಳನ್ನು ಅರಿತುಕೊಂಡವರಾಗಿದ್ದರು. ಹೀಗಾಗಿ ಮತದಾರರು ಶಿವಳ್ಳಿ ಅವರನ್ನು ಅಪ್ಪಿಕೊಂಡಿದ್ದರು. ಈ ಸಲದ ಉಪ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಮತದಾರರು ಗೆಲ್ಲಿಸುತ್ತಾರೆ ಎಂಬ ಆತ್ಮ ವಿಶ್ವಾಸ ನಮಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಹೇಳಿದರು.

ಅವರು ಪಟ್ಟಣದ ಅರವಿಂದ ಕಟಗಿ ಅವರ ನಿವಾಸದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡುತ್ತಾ ಪಶ್ಚಿಮ ಬಂಗಾಲದಲ್ಲಿ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಪ್ರದಾನ ಮಂತ್ರಿ ನರೇಂದ್ರ ಮೋದಿ ಹೇಳುತ್ತಾರೆ. ಕರ್ನಾಟದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ.

ಇದೆಲ್ಲವೂ ಅವರು ಅಂದು ಕೊಂಡಂತೆ ಆಗುವುದಿಲ್ಲ. ಮೇ 23 ರಂದು ಈ ನಾಡಿನ ಜನತೆಗೆ ತಿಳಿಯಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳು ಸೇರಿಕೊಂಡು ಸರ್ಕಾರ ಮಾಡಲಿದ್ದಾರೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಸೇರಿಕೊಂಡು ಮೈತ್ರಿ ಸರ್ಕಾರ ಮುಂದುವರೆಯಲಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುತ್ತೇವೆ ಎಕೆಂದರೆ ಮೈತ್ರಿ ಸರ್ಕಾರ  ಬಡವರ ಏಳ್ಗೆಗಾಗಿ ದುಡಿಯುತ್ತಲೆ ಬಂದಿದೆ. ಕುಂದಗೋಳ ಮತ್ತು ಚಿಂಚೋಳಿ ಈ ಎರಡು ಉಪಚುನಾವಾಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವನ್ನು ಹೊಂದಿ ದ್ದೇವೆ. ಲೋಕಸಭೆ ಮತ್ತು ಈ ರಾಜ್ಯ ವಿಧಾನ ಸಭೆಯ ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು.

ಪದೇ ಪದೇ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ ಎಂದು ಹೇಳುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪಕ್ಷದ ಶಾಸಕರ ಬಹುಮತವನ್ನು ತೋರಿಸಿ ಸರ್ಕಾರವನ್ನು ರಚಿಸಲಿ ಎಂದು ಸವಾಲು ಹಾಕಿದರು. ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಮೇ 23ರ ನಂತರ ದೇಶದಲ್ಲಿ ಒಂದು ಹೊಸ ಬದಲಾವಣೆ ಕಾಣಲಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಸೇರಿಕೊಂಡು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್, ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಸಚಿವ ಎಚ್.ಕೆ. ಪಾಟೀಲ, ಆರ್.ವಿ. ದೇಶಪಾಂಡೆ, ವೀರಣ್ಣಾ ಮೆತ್ತಿಗಟ್ಟಿ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಅನಿಲಕುಮಾರ ಪಾಟೀಲ, ಅರವಿಂದ ಕಟಗಿ, ಎಂ.ಎಸ್. ಅಕ್ಕಿ, ಆರ್.ಬಿ. ತಿಮ್ಮಾಪೂರ ಮತ್ತಿತರರು ಹಾಜರಿದ್ದರು.

Facebook Comments