ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಡೆಡ್‌ಲೈನ್‌..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27-ಅರ್ಹರಲ್ಲದವರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಯನ್ನು ಹಿಂತಿರುಗಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ಪಡಿತರ ಚೀಟಿ ವಾಪಸ್ ಮಾಡದ ಅನರ್ಹರಿಗೆ ದಂಡ ವಿಧಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಉನ್ನತಾಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ತಿಂಗಳೊಳಗೆ ಅನರ್ಹರು ಪಡಿತರ ಚೀಟಿ ವಾಪಸ್ ಮಾಡದಿದ್ದರೆ ಪಡಿತರ ಪಡೆದ ದಿನಾಂಕದಿಂದ ಇಂದಿನವರೆಗೆ ಪಡೆದ ಪಡಿತರದ ಪ್ರಮಾಣದ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಎರಡು ತಿಂಗಳ ನಂತರ ಅನರ್ಹರು ಪಡಿತರ ಚೀಟಿ ಹೊಂದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಸಿವಿನಿಂದ ಯಾರೂ ಇರಬಾರದು ಎಂಬ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಪಡಿತರವನ್ನು ನೀಡಲಾಗುತ್ತಿದೆ. ಅಗತ್ಯವಿಲ್ಲದವರು ಪಡಿತರವನ್ನು ಪಡೆಯಬಾರದು. ಏಕೆಂದರೆ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದು ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು. ನ್ಯಾಯಬೆಲೆ ಅಂಗಡಿಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮಾರಾಟ ಮಾಡುವ ಚಿಂತನೆ ಇದೆ ಎಂದರು.

ಮಾ.5ರಂದು ಮಂಡನೆಯಾಗುವ ರಾಜ್ಯ ಬಜೆಟ್ ನಂತರ ಅನ್ನಭಾಗ್ಯ ಯೋಜನೆಯಲ್ಲಾಗುವ ಬದಲಾವಣೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು. ಕಾನೂನು ಮಾಪನ ಇಲಾಖೆಯಲ್ಲಿ ಇರುವ ಇ-ಮಾಪನ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿ ಇ ಮಾಪನ್ ಟ್ಯಾಪ್-2ನ್ನು ಮಾಡಲಾಗುವುದು. ಸತ್ಯಾಪನಾ ಪ್ರಮಾಣ ಪತ್ರ, ಶುಲ್ಕ, ದಂಡಗಳಿಗೆ ಸಂಬಂಧಿಸಿದಂತೆ ನೀಡಲಾಗುವ ಹಣ ಸಂದಾಯ ರಸೀದಿ, ಮೊಕದ್ದಮೆ ಹೂಡಿಕೆ, ಜಪ್ತಿ ರಸೀದಿ, ತೂಕ ಮತ್ತು ಅಳತೆಗಳ ಲೈಸೆನ್ಸ್ ನೀಡುವಿಕೆ, ಪೆÇಟ್ಟಣ, ಸಾಮಾಗ್ರಿ ಅಡಿಯಲ್ಲಿ ನೀಡಲಾಗುವ ನೋಂದಣಿ ಪ್ರಮಾಣಪತ್ರ ಮೊದಲಾದವನ್ನು ಆನ್‍ಲೈನ್ ಮೂಲಕ ನೀಡಲಾಗುತ್ತಿದೆ.

2019-20ನೇ ಸಾಲಿನಲ್ಲಿ ಜನವರಿ ಅಂತ್ಯದವರೆಗೂ 32,29,87,817 ಸತ್ಯಾಪನಾ ಶುಲ್ಕವನ್ನು ವಸೂಲಿ ಮಾಡಲಾಗಿದೆ. 43,842 ತಪಾಸಣೆ ಕೈಗೊಂಡಿದ್ದು, 17,883 ಮೊಕದ್ದಮೆ ಹೂಡಲಾಗಿದೆ. 4,72, 27,300 ಅಭಿಸಂಧಾನದ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ ಉಪಸ್ಥಿತರಿದ್ದರು.

Facebook Comments