ಗೆದ್ದವರಿಗೆ ಮಂತ್ರಿ ಸ್ಥಾನ ಫಿಕ್ಸ್ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.6-ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರು ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಅವರಿಗೆ ಕೊಟ್ಟಿರುವ ಮಾತಿನಂತೆ ನಡೆದುಕೊಳ್ಳಬೇಕು. 15ಕ್ಕೆ ಹದಿನೈದು ಕ್ಷೇತ್ರಗಳಲ್ಲಿ ಗೆದ್ದರೂ ಎಲ್ಲರನ್ನು ಸಂಪುಟಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಒಂದು ವೇಳೆ ಉಪಚುನಾವಣೆಯಲ್ಲಿ ಸೋತರೆ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿ ಸಚಿವರಾಗಿ ಮಾಡುವ ಬಗ್ಗೆ ಮಾತುಕತೆ ನಡೆದಿಲ್ಲ. ಪರಾಭವಗೊಂಡವರ ಬಗ್ಗೆ ಸ್ಥಾನಮಾನ ಕುರಿತು ಕೇಂದ್ರವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.ಕೆಲವರಿಗೆ ಉಪಚುನಾವಣೆಯಲ್ಲಿ ನಿಲ್ಲುವ ಬದಲು ಮೇಲ್ಮನೆಯಿಂದ ಆಯ್ಕೆ ಮಾಡಿ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ತೀರ್ಮಾನವಾಗಿತ್ತು. ಆದರೆ ಕೆಲವರು ಒಪ್ಪದೆ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದರು ಎಂದು ಹೇಳಿದರು.

ಉಪಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದ್ದು, ಯಾವ ರಾಜಕೀಯ ಲೆಕ್ಕಾಚಾರಗಳು ನಡೆಯುವುದಿಲ್ಲ. ಜನತೆ ಅಭಿವೃದ್ಧಿ ಪರವಾದ ಸರ್ಕಾರಕ್ಕೆ ಮತ ಹಾಕುವುದರಲ್ಲಿ ಸಂಶಯವಿಲ್ಲ. ಡಿ.9ರ ನಂತರ ಬಿಜೆಪಿ ಸ್ಪಷ್ಟ ಜನಾದೇಶ ಪಡೆಯಲಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿದ್ದು, ಅಭಿವೃದ್ಧಿ ಪರವಾದ ಆಡಳಿತ ನೀಡುವುದಾಗಿ ಈಶ್ವರಪ್ಪ ತಿಳಿಸಿದರು.

# ಎಲ್ಲ ಗ್ರಾಮಪಂಚಾಯತ್‍ಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಕ್ರಮ :
ಬೆಂಗಳೂರು,ಡಿ.6-ರಾಜ್ಯದ ಎಲ್ಲ ಗ್ರಾಮಪಂಚಾಯತ್‍ಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತಿ ಗ್ರಾಮಪಂಚಾಯ್ತಿಗೆ ಕೇಂದ್ರ ಸರ್ಕಾರದಿಂದ 20 ಲಕ್ಷ ಅನುದಾನ ಬಂದಿದೆ. ರಾಜ್ಯದ ಎಲ್ಲ ಪಂಚಾಯ್ತಿಗಳಲ್ಲೂ ಅನುಷ್ಠಾನಗೊಳ್ಳಲಿದೆ. ಈಗಾಗಲೇ ಗ್ರಾಮಪಂಚಾಯ್ತಿ ಅಧ್ಯಕ್ಷರ ಸಭೆ ನಡೆಸಿ ತರಬೇತಿಯನ್ನು ನೀಡಲಾಗಿದೆ ಎಂದರು.

ಘನ ತ್ಯಾಜ್ಯ ವಿಲೇವಾರಿಗಾಗಿ ಜಿಲ್ಲೆಗೊಬ್ಬರಂತೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಆಯಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಭೂಮಿಯಲ್ಲಿ ಕಸ ವಿಲೇವಾರಿ ಮಾಡಲಾಗುತ್ತದೆ. ಒಂದು ವೇಳೆ ಸರ್ಕಾರಿ ಜಾಗ ಇಲ್ಲದಿದ್ದರೆ ಖಾಸಗಿ ಜಮೀನನ್ನು ಖರೀದಿಸಲಾಗುತ್ತದೆ. ಈಗಾಗಲೇ ಬಹಳಷ್ಟು ಗ್ರಾಪಂಗಳು ಕಸ ವಿಲೇವಾರಿಗೆ ಜಾಗ, ಬೇಕಾದ ವಾಹನಗಳ ಖರೀದಿಯಲ್ಲಿ ತೊಡಗಿದ್ದು, ಒಂದೆರಡು ವರ್ಷದಲ್ಲಿ ಈ ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದರು.

ಸೋಲಾರ್ ಅಳವಡಿಕೆ: ಪ್ರತಿ ಗ್ರಾಮಪಂಚಾಯ್ತಿಗಳಿಗೂ ಸೋಲಾರ್ ದೀಪ ಅಳವಡಿಸಲು ಚಿಂತನೆ ಮಾಡಲಾಗಿದೆ. 14ನೇ ಹಣಕಾಸು ಯೋಜನೆಯ ಅನುದಾನವನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಅಲ್ಲದೆ ಶಾಸಕರ ಪ್ರದೇಶಾಭಿವೃದ್ದಿ ನಿಧಿಯ ಅನುದಾನವನ್ನು ನೀಡುವಂತೆ ಮನವಿ ಮಾಡಲಾಗುವುದು. ಮೊದಲ ಹಂತದಲ್ಲಿ ಕಟ್ಟಡಗಳಿಗೆ ಸೋಲಾರ್ ದೀಪ ಅಳವಡಿಸಿ ಆನಂತರ ಹಂತ ಹಂತವಾಗಿ ಬೀದಿಗಳಿಗೆ ಹಾಗೂ ಮನೆಗಳಿಗೆ ಅಳವಡಿಸುವ ಉದ್ದೇಶವಿದೆ ಎಂದರು.

# ಪ್ರತಿ ಮನೆಗೆ ನಲ್ಲಿ :
ಕೇಂದ್ರ ಸರ್ಕಾರದ ಜನಾಮೃತ ಯೋಜನೆಯಡಿ ರಾಜ್ಯದ ರಾಮನಗರ, ಬಾಗಲಕೋಟೆ, ಕೋಲಾರ, ವಿಜಪುರ ಜಿಲ್ಲೆಗಳಲ್ಲಿ ಪ್ರತಿ ಮನೆಗೂ ನಲ್ಲಿ ನೀರು ಒದಗಿಸುವ ಯೋಜನೆ ಅನುಷ್ಠಾನಗೊಳಿಸಲಾಗುವುದು. ಕೇಂದ್ರ ಸರ್ಕಾರ ಈ ಯೋಜನೆಗೆ ಇನ್ನು ಅನುದಾನ ನಿಗದಪಡಿಸಿಲ್ಲ. ನಿಗದಿಪಡಿಸಿದ ನಂತರ ರಾಜ್ಯದ ಪಾಲು ಎಷ್ಟು ಎಂಬುದು ಗೊತ್ತಾಗಲಿದೆ. ಈ ಯೋಜನೆ ಬಗ್ಗೆ ಮುಂದಿನ ಬಜೆಟ್‍ನಲ್ಲಿ ಅನುದಾನ ಒದಗಿಸಲಾಗುತ್ತದೆ ಎಂದು ಹೇಳಿದರು.

Facebook Comments

Sri Raghav

Admin