ಅಗತ್ಯ ಪ್ರವಾಹ ಪರಿಹಾರವನ್ನು ಕೇಂದ್ರದಿಂದ ತರುತ್ತೇವೆ : ಕೆ.ಎಸ್.ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ,ಆ.22- ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರದ ಅಗತ್ಯ ಅನುದಾನವನ್ನು ಕೇಂದ್ರದಿಂದ ತರುತ್ತೇವೆ ಎಂದು ಸಚಿವ ಈಶ್ವರಪ್ಪ ಭರವಸೆ ನೀಡಿದರು.  ವಿಜಯಪುರದಲ್ಲಿ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಪ್ರವಾಹದಿಂದ ಉಂಟಾಗಿರುವ ಹಾನಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿದೆ. ಹೆಚ್ಚಿನ ಪ್ರಮಾಣದ ಪರಿಹಾರ ಬರುವ ವಿಶ್ವಾಸವಿದೆ ಎಂದರು.

ನೆರೆ ಪರಿಹಾರ ವಿಚಾರದಲ್ಲಿ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಜನರ ಸಂಕಷ್ಟಗಳನ್ನು ಬಗೆಹರಿಸುವುದು ನಮಗೆ ಪ್ರಮುಖವಾಗಿದೆ ಎಂದು ಹೇಳಿದರು.  ಉತ್ತರ ಕರ್ನಾಟಕ, ಉತ್ತರ ಕನ್ನಡ, ಕರಾವಳಿ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ನೆರೆ ಹಾವಳಿಯಿಂದ ಅವಘಡಗಳು ಸಂಭವಿಸಿದ್ದು, ಜನ, ಜನವಾರು ಸಂಕಷ್ಟಕ್ಕೆ ಈಡಾಗಿದ್ದಾರೆ.

ತಕ್ಷಣದ ಪರಿಹಾರಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ತಹಶೀಲ್ದಾರ್‍ಗೆ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ಶಾಸಕರು ಪಕ್ಷಾತೀತವಾಗಿ ಪ್ರವಾಹ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪ್ರತಿ ಸಂತ್ರಸ್ತರ ಖಾತೆಗೆ 10 ಸಾವಿರ ರೂ. ತಲುಪಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಎಲ್ಲ ನೂತನ ಸಚಿವರು ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರವಾಹ ಪರಿಹಾರ ಕಾಮಗಾರಿಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪರಿಹಾರ ಸಿಕ್ಕಿಲ್ಲದ್ದವರಿಗೆ ಪರಿಹಾರ ನೀಡಲಾಗುತ್ತದೆ. ಮಣ್ಣಿನ ಮನೆಗಳಿವೆ ಅಂತಹ ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆದಿದೆ. ಪ್ರವಾಹದಿಂದ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ತಾತ್ಕಾಲಿಕ ಪರಿಹಾರದ ಜೊತೆಗೆ ಶಾಶ್ವತ ಪರಿಹಾರಕ್ಕೂ ಸರ್ಕಾರ ಮುಂದಾಗಲಿದೆ. ಸಚಿವರ ಭೇಟಿಯಿಂದ ಸಂತ್ರಸ್ತರಲ್ಲಿ ಸದ್ಯ ಧೈರ್ಯ ಬಂದಿದೆ ಎಂದು ತಿಳಿಸಿದರು.

Facebook Comments