ಕೊರೊನಾ ಇನ್ನೂ ಹೋಗಿಲ್ಲ, ಮಾಸ್ಕ್ ಧರಿಸಲು ಸಮಸ್ಯೆಯಾದರೂ ಏನು ನಿಮಗೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.7- ರಾಜ್ಯದಲ್ಲಿ ಕೊರೊನಾ ಸಂಖ್ಯೆ ಇಳಿಮುಖವಾಗಿದ್ದರೂ ಅದು ಸಂಪೂರ್ಣವಾಗಿ ನಮ್ಮನ್ನು ಬಿಟ್ಟು ಹೋಗಿಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ. ದೇಶದಲ್ಲಾಗಲಿ ಅಥವಾ ಕರ್ನಾಟಕದಲ್ಲಾಗಲಿ ಕೊರೊನಾ ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬುದನ್ನು ಎಲ್ಲರೂ ತಿಳಿಯಬೇಕು.

ದಿನದಿಂದ ದಿನಕ್ಕೆ ಅದರ ಸಂಖ್ಯೆ ಕಡಿಮೆಯಾಗಿರಬಹುದೇ ವಿನಃ ಕೊರೊನಾ ಹೋಗೇಬಿಟ್ಟಿದೆ ಎಂದು ಕೆಲವರು ಭಾವಿಸಿದ್ದಾರೆ. ಮಾಸ್ಕ್ ಧರಿಸಲು ಕಷ್ಟವಾದರೆ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಅಸಮಾಧಾನ ಹೊರಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾಗೆ ಈಗತಾನೇ ಲಸಿಕೆಯನ್ನು ಕಂಡುಹಿಡಿಯಲಾಗಿದೆ. ಅದನ್ನು ಪಡೆದು ಯಶಸ್ವಿಯಾದ ನಂತರ ಕೊರೊನಾ ಸಂಪೂರ್ಣವಾಗಿ ಹೋದ ಮೇಲೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಕೆಲವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮಾಸ್ಕ್ ಧರಿಸಲು ಇರುವ ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿದರು.

ಬ್ರಿಟನ್‍ನಲ್ಲಿ ನಿನ್ನೆ ಒಂದೇ ದಿನ 74 ಸಾವಿರ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಸುಮಾರು 1100 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸೋಂಕು ಇಳಿಕೆಯಾಗುತಿತ್ತಿದೆ. ಆದರೂ ಪ್ರತಿಯೊಬ್ಬರೂ ಮಾರ್ಗಸೂಚಿ ಪಾಲನೆ ಮಾಡಬೇಕೆಂದು ಹೇಳಿದರು. ಬ್ರಿಟನ್‍ನಿಂದ ಸ್ವದೇಶಕ್ಕೆ ಆಗಮಿಸಿದ್ದ ಬೆಂಗಳೂರಿನ 112 ಹಾಗೂ ಇತರೆ ಜಿಲ್ಲೆಗಳ ಐದು ಮಂದಿ ಸೇರಿದಂತೆ ಒಟ್ಟು 117 ಮಂದಿ ಈವರೆಗೂ ಪತ್ತೆಯಾಗಿಲ್ಲ.

ದಯವಿಟ್ಟು ಎಲ್ಲೇ ಇದ್ದರೂ ನೀವು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಪಡಬೇಕೆಂದು ಮನವಿ ಮಾಡಿದರು. ಇವರ ಪಾಸ್‍ಪೋರ್ಟ್‍ಗಳು ವಿದೇಶದಲ್ಲಿರುವುದರಿಂದ ವಿಳಾಸ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ನಾವು ಈಗಾಗಲೇ ಗೃಹ ಇಲಾಖೆಗೂ ಮನವಿ ಮಾಡಿದ್ದೇವೆ. ನಾಪತ್ತೆಯಾಗಿರುವುದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವ ಸಾಧ್ಯತೆ ಇರುವುದರಿಂದ ಆಸ್ಪತ್ರೆಗೆ ದಾಖಲಾಗಬೇಕೆಂದು ಸುಧಾಕರ್ ಹೇಳಿದರು.

ನಾವು ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಇರುವವರನ್ನು ಪತ್ತೆಹಚ್ಚುವಂತೆ ಮನವಿ ಮಾಡಿದ್ದೇವೆ. ಈವರೆಗೂ ಒಟ್ಟು 2523 ಸಂಪರ್ಕಿತರ ಪೈಕಿ ಬ್ರಿಟನ್‍ನಿಂದ ಬಂದಿದ್ದ 40 ಮಂದಿಗೆ ಆರ್‍ಟಿಪಿಸಿಆರ್ ಚಿಕಿತ್ಸೆ ನಡೆಸಲಾಗಿತ್ತು. ಇದರಲ್ಲಿ 25 ಮಂದಿಗೆ ಪಾಸಿಟಿವ್ ಬಂದಿತ್ತು. ಈವರೆಗೂ ಒಟ್ಟು 10 ಮಂದಿಗೆ ಮಾತ್ರ ಬ್ರಿಟನ್‍ನ ರೂಪಾಂತರಗೊಂಡ ಸೋಂಕು ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

# ನಾಳೆಯಿಂದ ಎರಡನೆ ಹಂತದ ಪೂರ್ವಾಭ್ಯಾಸ: ಈಗಾಗಲೇ ರಾಜ್ಯದ ಐದು ಜಿಲ್ಲೆಗಳಲ್ಲಿ ಮೊದಲ ಹಂತದ ಲಸಿಕೆ ಅಣಕು ಪ್ರದರ್ಶನ ಯಶಸ್ವಿಯಾಗಿರುವುದರಿಂದ ನಾಳೆ ರಾಜ್ಯಾದ್ಯಂತ ಎರಡನೆ ಹಂತದ ಅಣಕು ಪೂರ್ವಾಭ್ಯಾಸ ಆರಂಭವಾಗಲಿದೆ ಎಂದರು. ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳನ್ನು ಬಳಸಿಕೊಳ್ಳಲಾಗುವುದು. ನಮ್ಮ ಇಲಾಖೆಯ ಸಿಬ್ಬಂದಿಯು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ನಾವು ಒಂದೊಂದು ಕೇಂದ್ರಗಳಲ್ಲಿ 25 ಮಂದಿ ಸೇರಿದಂತೆ ಒಟ್ಟು 125 ಮಂದಿಗೆ ಪ್ರಾಯೋಗಿಕ ಪ್ರದರ್ಶನ ಮಾಡಿದ್ದೇವೆ. ಯಾವುದೇ ರೀತಿಯ ಅಡ್ಡ ಪರಿಣಾಮವಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ಮತದಾರರಿಗೆ ಯಾವ ರೀತಿ ಮತದಾನ ಮಾಡಬೇಕು ಎಂಬುದನ್ನು ಅಧಿಕಾರಿಗಳು ಹೇಗೆ ಮನವರಿಕೆ ಮಾಡುತ್ತಾರೋ ಅದೇ ಮಾದರಿಯಲ್ಲಿ ಲಸಿಕೆ ವಿತರಣೆ ಬಗ್ಗೆ ನುರಿತ ತಜ್ಞರು ಆರೋಗ್ಯಾಧಿಕಾರಿಗಳಿಗೆ ತರಬೇತಿ ಕೊಡುವರು.

41 ವರ್ಷದ ನರ್ಸ್ ಒಬ್ಬರು ಸಾವನ್ನಪ್ಪಿರುವುದು ತಿಳಿದುಬಂದಿದೆ. ಆದರೆ, ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂಬುದನ್ನು ವಿಧಿ-ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ತಿಳಿಯಲಿದೆ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ಹಕ್ಕಿಜ್ವರ ಹಬ್ಬದಂತೆ ತಡೆಗಟ್ಟಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಶು ಸಂಗೋಪನೆ ಇಲಾಖೆಗಳು, ನಗರಾಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಈವರೆಗೂ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ. ಜನರು ಆತಂಕ ಪಡಬಾರದೆಂದು ಅವರು ಮನವಿ ಮಾಡಿದರು.

Facebook Comments