ಮತ್ತೆ ಲಾಕ್‍ಡೌನ್ ಮಾಡಲ್ಲ, ಸುಳ್ಳುಸುದ್ದಿ ಹಬ್ಬಿಸಿದರೆ ಹುಷಾರ್ : ಸಚಿವ ಸುಧಾಕರ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.29- ದಕ್ಷಿಣ ಆಫ್ರಿಕಾ ಸೇರಿದಂತೆ ಮತ್ತಿತರ ರಾಷ್ಟ್ರಗಳಲ್ಲಿ ಓಮಿಕ್ರಾನ್ ಹೊಸ ತಳಿಯ ಸೋಂಕು ಕಾಣಸಿಕೊಂಡಿರುವುದರಿಂದ ರಾಜ್ಯದಲ್ಲಿ ಪುನಃ ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಒಂದು ವೇಳೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.

ಈ ಹಿಂದೆ ಮೊದಲನೇ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಲಾಕ್‍ಡೌನ್ ಜಾರಿ ಮಾಡಿದ ಪರಿಣಾಮ ಸಾಕಷ್ಟು ನಷ್ಟ ಅನುಭವಿಸಬೇಕಾಯಿತು. ಅನೇಕರು ಉದ್ಯೋಗಗಳನ್ನು ಕಳೆದುಕೊಂಡರು. ನಮ್ಮ ಮುಂದೆ ಲಾಕ್‍ಡೌನ್ ಮಾಡುವ ಚಿಂತನೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಲಾಕ್‍ಡೌನ್ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿ ವದ್ದಂತಿಗಳನ್ನು ಹಬ್ಬಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗುಡುಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ವೈರಾಣು ಹಬ್ಬುವುದರ ಬಗ್ಗೆ ಸಾಮಾಜಿಕ ಅರಿವು ಮೂಡಿಸಿದರೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಸುಳ್ಳು ಸುದ್ದಿ ಹಬ್ಬಿಸುವುದು ಬೇಡ ಎಂದು ಮನವಿ ಮಾಡಿದರು.
ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಲಾಕ್‍ಡೌನ್ ಪರಿಣಾಮ ಈ ಹಿಂದೆ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಪುನಃ ಮತ್ತೆ ಅವರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ಸರ್ಕಾರದ ಅಕೃತವಾಗಿ ಪ್ರಕಟಿಸುವವರೆಗೆ ವದಂತಿಗಳನ್ನು ಜನರು ನಂಬದಂತೆ ಸಲಹೆ ಮಾಡಿದರು.

ಡೆಲ್ಟಾಕ್ಕೆ ಹೋಲಿಸಿದರೆ ಇದರ ಪರಿಣಾಮ ಯಾವ ರೀತಿ ಹಬ್ಬುತ್ತದೆ ಎಂಬುದರ ಬಗ್ಗೆ ಈವರೆಗೂ ದೃಢಪಟ್ಟಿಲ್ಲ. ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ನನಗಿರುವ ಮಾಹಿತಿಯಂತೆ ಡೆಲ್ಟಾಕ್ಕೆ ಹೋಲಿಸಿದರೆ ಓಮಿಕ್ರಾನ್ ವೇಗವಾಗಿ ಹಬ್ಬಿದರೂ ಅಷ್ಟು ಪರಿಣಾಮ ಇರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹೊಸ ತಳಿ ರೋಗ ಲಕ್ಷಣಗಳು ವಾಂತಿ ಬರೋವ ಹಾಗೆ, ಪಲ್ಸ್ ರೇಟ್ ಜಾಸ್ತಿ, ಸುತ್ತು ಆಗೋದು, ಆಯಾಸ ಆಗೋದು, ಡೆಲ್ಟಾ ರೀತಿ ಟೇಸ್ಟ್, ವಾಸನೆ ಇಲ್ಲದೆ ಇರುವುದು ಇಂತಹ ಲಕ್ಷಣ ಇದರಲ್ಲಿ ಇರುವುದಿಲ್ಲ. ಆದರೂ ನಾವೆಲ್ಲ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡುತ್ತೇನೆ ಎಂದರು.
ಕಳೆದ 9 ತಿಂಗಳಿನಿಂದ ಡೆಲ್ಟಾ ವೈರಸ್ ಇದೆ. ಆದರೆ ಅವರಿಗೆ ಕಾಣಿಸಿಕೊಂಡಿರುವುದು ಡೆಲ್ಟಾ ಅಲ್ಲ. ಓಮಿಕ್ರಾನ್ ಇರಬಹುದು ಎಂಬುದಾಗಿ ಅನುಮಾನ. ಈಗ ಅಕೃತವಾಗಿ ಅದನ್ನು ವ್ಯಕ್ತಪಡಿಸೋಕೆ ಆಗಲ್ಲ. ಕೇಂದ್ರ ಆರೋಗ್ಯ ಇಲಾಖೆ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ ಎಂದು ಮಾಹಿತಿ ನೀಡಿದರು.

63 ವರ್ಷ ಹಿರಿಯರೊಬ್ಬರ ವೈದ್ಯಕೀಯ ವರದಿ ಬಂದಿದೆ. ಆದರೆ ಅದು ಸ್ವಲ್ಪ ಭಿನ್ನವಾಗಿದೆ. ಆ ವರದಿಯನ್ನು ಐಸಿಎಂಆರ್ ಜೊತೆಗೆ ಚರ್ಚೆ ಮಾಡುತ್ತೇವೆ ಎಂದರು. ಜಿನೋಮಿಕ್ಸ್ ಸೀಕ್ವೆನ್ಸ್ ವರದಿ ಬರಲು ಒಂದು ವಾರ ಬೇಕು. ಡಿಸೆಂಬರ್ 1 ರಂದು ನಮಗೆ ವರದಿ ಬರುವ ಸಂಭವವಿದೆ. ಪ್ರಸ್ತುತ 12 ದೇಶಗಳಲ್ಲಿ ಹೊಸ ವೈರಸ್ ಬಂದಿದೆ ಎಂದು ವಿವರಿಸಿದರು.

ಪ್ರತಿದಿನ ರಾಜ್ಯಕ್ಕೆ ಅಂತಾರಾಷ್ಟ್ರೀಯ ವಿಮಾನಗಳು ಬರುತ್ತಿವೆ. ಪ್ರಯಾಣಿಕರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಕಡ್ಡಾಯವಾಗಿ ಎಲ್ಲರನ್ನೂ ಟೆಸ್ಟ್ ಮಾಡುವ ಕೆಲಸ ಮಾಡಲಾಗುತ್ತಿದೆ. 12-13 ದಿನಗಳಿಂದ ಬಂದವರ ಮೇಲೆ ನಿಗಾ ಇಟ್ಟು, ಅವರ ಸಂಪರ್ಕದಲ್ಲಿದ್ದವರನ್ನು ಟ್ರೇಸ್ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ನಾಳೆ ಬೆಳಗ್ಗೆ 10 ಗಂಟೆಯಿಂದ 5-6 ಗಂಟೆಗಳ ಕಾಲ ಆರೋಗ್ಯ ಇಲಾಖೆ ಅಕಾರಿಗಳ ಸಭೆ ನಡೆಸಲಾಗುವುದು. ಸಭೆಯಲ್ಲಿ ಸುರ್ಘವಾಗಿ ಚರ್ಚೆ ಮಾಡುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದಾರೆ. ಅವರನ್ನು ಕೂಡ ಸಭೆಗೆ ಕರೆದಿದ್ದೇನೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ 15 ತಿಂಗಳಿಂದ ಕೋವಿಡ್‍ನಿಂದ ಮೃತರಾದ ಶವ ಇಟ್ಟುಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಇಎಸ್‍ಐ ಆಸ್ಪತ್ರೆ ಕಾರ್ಮಿಕ ಇಲಾಖೆಗೆ ಬರುತ್ತದೆ. ಆದರೂ ನಾನು ಮಾಹಿತಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ಇಎಸ್‍ಐ ಆಸ್ಪತ್ರೆಯಲ್ಲಿ ಕೆಲವರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅ ಬಗ್ಗೆಯೂ ಸಂಬಂಧಪಟ್ಟವರ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದರು.

ಚಿಕ್ಕಬಳ್ಳಾಪುರ-ಕೋಲಾರ ಪರಿಷತ್ ಚುನಾವಣೆ ಕುರಿತು ಮಾತನಾಡಿದ ಅವರು, ನಾವು ಆಶಾಭಾವನೆಯಿಂದ ರಾಜಕಾರಣದಲ್ಲಿ ಮುನ್ನುಗ್ಗಬೇಕು. ನಾವು ಯಾವುದೇ ಚುನಾವಣೆ ಆದರೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದರು.

ನಮ್ಮ ಭಾಗದಲ್ಲಿ ಬಿಜೆಪಿಗೆ ಕಡಿಮೆ ಶಾಸಕರು ಇದ್ದಾರೆ. 3 ಜಿಲ್ಲೆಗಳಿಗೂ ನಾನು ಒಬ್ಬನೇ ಶಾಸಕ ಇರುವುದು. ಇದು ಬಹಳ ದೊಡ್ಡ ಸವಾಲು. ಈ ಸವಾಲು ನಿಭಾಯಿಸಬೇಕಿದೆ. ಏನಾದರೂ ಮಾಡಿ ಈ ಚುನಾವಣೆ ಗೆಲ್ಲಲು ಶ್ರಮ ಹಾಕಿದ್ದೇವೆ. ಗ್ರಾಮ ಪಂಚಾಯತಿ ಸದಸ್ಯರು ಬಿಜೆಪಿ ಆಡಳಿತ ನೋಡಿ ಬಿಜೆಪಿಗೆ ಒಂದು ಅವಕಾಶ ಕೊಡಬೇಕು ಎನ್ನುವ ಆಸೆ ವ್ಯಕ್ತಪಡಿಸಿದ್ದಾರೆ. ಈ ಬಾರಿ ಕೋಲಾರದಲ್ಲಿ ಅಚ್ಚರಿ ಫಲಿತಾಂಶ ಬಂದರೂ ಆಶ್ಚರ್ಯಪಡಬೇಕಿಲ್ಲ ಎಂದರು.

Facebook Comments

Sri Raghav

Admin