ಸದ್ಯಕ್ಕೆ ಶಾಲಾ ಕಾಲೇಜುಗಳ ಪುನರಾರಂಭ ಇಲ್ಲ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.22-ಮಕ್ಕಳ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿರುವ ಸಚಿವ ಡಾ.ಕೆ.ಸುಧಾಕರ್, ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ತರಾತುರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಬೇಕೆಂಬ ಬೇಡಿಕೆಯೂ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಯಥಾಸ್ಥಿತಿ ಮುಂದುವರೆಸಿ ಎಂದು ಪೋಷಕರು ಹೇಳುತ್ತಿದ್ದಾರೆ ಎಂದಿದ್ದಾರೆ.

ಸರ್ಕಾರಕ್ಕೆ ಶಾಲಾಕಾಲೇಜುಗಳನ್ನು ಆರಂಭಿಸುವ ಬಗ್ಗೆ ಆತುರವೇನಿಲ್ಲ. ಇದೊಂದು ಸೂಕ್ಷ್ಮ ವಿಷಯ. ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅವರ ಆರೋಗ್ಯವೂ ಅಷ್ಟೇ ಮುಖ್ಯ. ಹೀಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಮಕ್ಕಳಿಗೆ ಸೋಂಕು ಬೇಗನೆ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಾವು ಏನೇ ನಿರ್ಧಾರ ಕೈಗೊಳ್ಳುವ ಮುನ್ನ ಹತ್ತಾರು ಬಾರಿ ಯೋಚಿಸಬೇಕು. ನುರಿತ ಮಕ್ಕಳ ತಜ್ಞರು, ವೈದ್ಯರು, ನರ್ಸ್‍ಗಳನ್ನು ನೇಮಕ ಮಾಡಿಕೊಳ್ಳಬೇಕು. ಇದಕ್ಕೆ ಸಮಯಾವಕಾಶ ಬೇಕಾಗಿರುವುದರಿಂದ ಪ್ರತಿಯೊಂದು ನಿರ್ಧಾರವು ಮುಖ್ಯವಾಗಿರುತ್ತದೆ ಎಂದು ಹೇಳಿದರು.

ನಮಗೆ ಮಕ್ಕಳ ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಿದೆ. ಯಾವುದೇ ಒತ್ತಡಕ್ಕೆ ಮಣಿದು ಶಾಲಾಕಾಲೇಜುಗಳನ್ನು ಪ್ರಾರಂಭಿಸುವುದಿಲ್ಲ. ರಾಜ್ಯದ ಸ್ಥಿತಿಗತಿ, ಕೋವಿಡ್ ಸೋಂಕಿನ ಪ್ರಮಾಣ, ಪ್ರತಿಯೊಂದು ಲೆಕ್ಕಾಚಾರ ಹಾಕಿಯೇ ತೀರ್ಮಾನ ಮಾಡಬೇಕಾಗುತ್ತದೆ. ತಜ್ಞರ ಸಮಿತಿ ನೀಡುವ ಆಧಾರದ ಮೇಲೆ ಇವೆಲ್ಲವೂ ನಿರ್ಧಾರವಾಗುತ್ತದೆ ಎಂದು ವಿವರಿಸಿದರು.

ಪ್ರತಿ 14 ದಿನಗಳಿಗೊಮ್ಮೆ ತಾಂತ್ರಿಕ ಸಲಹಾ ಸಮಿತಿ ಹಾಗೂ ಅಕಾರಿಗಳು ಸಭೆ ನಡೆಸುತ್ತಾರೆ. ಅವರು ಕಾಲಕಾಲಕ್ಕೆ ಸರ್ಕಾರಕ್ಕೆ ವರದಿಯನ್ನು ನೀಡುತ್ತಾರೆ. ಆ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಯಾವುದೇ ಒತ್ತಡ ಬಂದರೂ ಸರಿಯೇ ಆತುರದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಲಸಿಕೆ ನೀಡುವುದರಲ್ಲಿ ಭಾರತ ಇಂದು ವಿಶ್ವದಲ್ಲಿಯೇ ದಾಖಲೆ ಬರೆದಿದೆ. ನಮ್ಮ ದೇಶದಲ್ಲಿ ನೀಡಿರುವಷ್ಟು ವಿಶ್ವದ ಯಾವುದೇ ಭಾಗದಲ್ಲೂ ನೀಡಿಲ್ಲ. ನಿನ್ನೆ ಒಂದೇ ದಿನ 81 ಲಕ್ಷಕ್ಕೂ ಅಕ ಮಂದಿಗೆ ಲಸಿಕೆ ಕೊಡಲಾಗಿದೆ. ದೇಶದಲ್ಲೇ ಕರ್ನಾಟಕ ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ 2ನೇ ರಾಜ್ಯವಾಗಿದೆ ಎಂದ ಪ್ರಶಂಸೆ ವ್ಯಕ್ತಪಡಿಸಿದರು.

ಡಾ.ದೇವಿಶೆಟ್ಟಿ ನೇತೃತ್ವದ ಸಮಿತಿಯು ಸರ್ಕಾರಕ್ಕೆ ವರದಿ ನೀಡಲಿದೆ. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮತ್ತಿತರರು ತೀರ್ಮಾನ ಕೈಗೊಳ್ಳಲಿದ್ದಾರೆ.

ಮಕ್ಕಳ ಭವಿಷ್ಯದ ಜೊತೆಗೆ ಆರೋಗ್ಯದ ಸುರಕ್ಷತೆಯನ್ನು ಸಹ ಗಮನದಲ್ಲಿಟ್ಟುಕೊಂಡೇ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ನಡೆಯಬೇಕು. ಕೆಲವು ಸೂಕ್ಷ್ಮ ವಿಚಾರಗಳಲ್ಲಿ ಏಕಾಏಕಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತಿಪಕ್ಷದವರು ಸರ್ಕಾರ ಲಸಿಕೆ ನೀಡಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದರು. ಈಗ ವಿಶ್ವದಲ್ಲೇ ಭಾರತ ಅತಿಹೆಚ್ಚು ಲಸಿಕೆ ನೀಡಿರುವ ದೇಶವಾಗಿದೆ. ಇನ್ನಾದರೂ ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಪರೋಕ್ಷವಾಗಿ ಕಾಂಗ್ರೆಸ್‍ಗೆ ಸುಧಾಕರ್ ಟಾಂಗ್ ನೀಡಿದರು.

ರಾಜ್ಯದಲ್ಲಿ ನಿನ್ನೆ 7 ಲಕ್ಷ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ನಿನ್ನೆ 11.22 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ನಾವು ಜನರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ನಮ್ಮ ನಿರೀಕ್ಷೆಗೂ ಮೀರಿ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin