‘ನನ್ನ ಕನಸು ಇಂದು ನನಸಾಗುತ್ತಿದೆ’ : ಡಾ.ಕೆ.ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ನ.8- ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಕನಸು ಇಂದು ನನಸಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಕೆ.ಸುಧಾಕರ್ ಅವರ ಪರಿಶ್ರಮದಿಂದ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ.

ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರುವುದರ ಜತೆಗೆ ಮಂಚೇನಹಳ್ಳಿ ನೂತನ ತಾಲ್ಲೂಕು ರಚನೆ ಹಾಗೂ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡುವ ಮಹತ್ತರ ಯೋಜನೆಗಳ ಹಿಂದೆ ಸುಧಾಕರ್ ಅವರ ಪರಿಶ್ರಮ ಎದ್ದು ಕಾಣುತ್ತಿದೆ.

ಬೋವಿ ಸಮಾವೇಶಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎರಡನೆ ಬಾರಿಗೆ ಆಗಮಿಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.
ಜಿಲ್ಲೆಗೆ ವೈದ್ಯಕೀಯ ಕಾಲೇಜು ಬೇಕೇ ಬೇಕೆಂದು ಪಟ್ಟು ಹಿಡಿದಿದ್ದ ಸುಧಾಕರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನವೊಲಿಸಿ ಕಾಲೇಜು ಮಂಜೂರು ಮಾಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಇದರ ಜತೆಗೆ 5000 ಮಂದಿಗೆ ನಿವೇಶನ ಹಂಚಿಕೆ ಮಾಡುತ್ತಿರುವ ಸುಧಾಕರ್ ಅವರ ಜನಪರ ಕಾಳಜಿಗೆ ಸ್ಥಳೀಯರು ಶಹಭಾಷ್‍ಗಿರಿ ನೀಡಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ನೂತನ ತಾಲ್ಲೂಕನ್ನಾಗಿ ಯಡಿಯೂರಪ್ಪ ಅವರು ಘೋಷಣೆ ಮಾಡುತ್ತಿರುವುದರ ಹಿಂದೆಯೂ ಸುಧಾಕರ್ ಅವರ ಶ್ರಮವಿದೆ.

ಇಡೀ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ಹೊಂದಿರುವ ಸುಧಾಕರ್ ಅವರು ಮಂಚೇನಹಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೂ ರೂಪುರೇಷೆ ಸಿದ್ಧಪಡಿಸಿದ್ದಾರೆ.

ಒಟ್ಟಾರೆ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಮುನ್ನುಡಿ ಬರೆಯಲಿದ್ದು , ಈ ಎಲ್ಲಾ ಹಿಂದಿನ ಪ್ರೇರಕ ಶಕ್ತಿ ಸುಧಾಕರ್ ಎಂದು ಇಲ್ಲಿನ ಜನ ಭಾವಿಸಿರುವುದು ಅತಿಶಯೋಕ್ತಿಯಲ್ಲ.

Facebook Comments