ಕಬಿನಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಭೀತಿ, ಹೈಅಲರ್ಟ್ ಘೋಷಣೆ ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಆ.8-ಕಬಿನಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಂ.ಜಿ ಶಂಕರ್ ಅವರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.

ಕೆ.ಆರ್.ನಗರ, ಪಿರಿಯಾಪಟ್ಟಣ ತಾಲ್ಲೂಕುಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಿದ್ದು, 10 ಸಾವಿರ ಕ್ಯೂಸೆಕ್ ನೀರನ್ನು ಹಾರಂಗಿ ಜಲಾಶಯದಿಂದ ಕಾವೇರಿಗೆ ಹರಿಸಲಾಗುತ್ತಿದೆ. ಹಾಗಾಗಿ ಈ ಪ್ರದೇಶದಲ್ಲಿನ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದ್ದಾರೆ.

ಕೇರಳದ ವಯನಾಡು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಹೆಚ್ಚು ಮಳೆ ಬೀಳುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇಂದು ಬೆಳಗ್ಗೆ ಕಬಿನಿ ಜಲಾಶಯದಿಂದ 60 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುತ್ತೂರು ಬ್ರಿಡ್ಜ್ ಬಳಿ ಹೆಚ್ಚಿನ ನೀರು ಹರಿದು ಬರುವ ಮುನ್ಸೂಚನೆ ಇದ್ದು ಮುಳುಗಡೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಜನತೆ ಈ ಮಾರ್ಗದಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ.

ನಿರಂತರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ, ವಯನಾಡು ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಕಬಿನಿ ಯೋಜನೆ ಇಂಜಿನಿಯರ್‍ಗಳೊಂದಿಗೆ ಸತತ ಸಂಪರ್ಕದಲ್ಲಿದೆ.

ಇದುವರೆಗೂ ಈ ಪ್ರದೇಶದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿಲ್ಲ. ಜನಜಾನುವಾರುಗಳಿಗೂ ತೊಂದರೆಯಾಗಿಲ್ಲ. ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡು ಹೈ ಅಲರ್ಟ್ ಘೋಷಿಸಲಾಗಿದೆ ಎಂದರು.

ಕಳೆದ ವರ್ಷ ಈ ಅವಧಿಯಲ್ಲಿ 80 ಸಾವಿರ ಕ್ಯೂಸೆಕ್ ನೀರು ಕಬಿನಿ ಜಲಾಶಯದಿಂದ ಬಿಡಲಾಗಿತ್ತು. ಈ ಬಾರಿ 60 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ ಎಂದು ಅಭಿರಾಮ್ ಶಂಕರ್ ತಿಳಿಸಿದ್ದಾರೆ.

# ಕೆಆರ್‍ಎಸ್‍ಗೆ ಒಳಹರಿವು ಹೆಚ್ಚಳ:
ಸತತವಾಗಿ ಕಳೆದೆರೆದು ಮೂರುದಿನಗಳಿಂದ ಕೊಡುಗು ಮತ್ತು ಕೇರಳ ವಯನಾಡಿನಲ್ಲಿ ಮಳೆಯಾಗತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಸಮೀಪದ ಕೆಆರ್‍ಎಸ್‍ಗೆ ನೀರಿನ ಒಳಹರಿವು ಹೆಚ್ಚಾಗಿದೆ.

ನಿನ್ನೆ ಸಂಜೆ ವೇಳೆಗೆ 25500 ಕ್ಯೂಸೆಕ್ ನೀರು ಹರಿದುಬಂದಿತ್ತು. ಜಲಾಶಯದಿಂದ 6 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಕೆಎಸ್‍ಆರ್‍ನಲ್ಲಿ ಈಗ 88 ಅಡಿಗಳಷ್ಟು ನೀರು ಸಂಗ್ರಹಿಸಲಾಗಿದೆ.

# ಶಾಲಾ-ಕಾಲೇಜಿಗೆ ರಜೆ:
ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಇಂದು ಸಹ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Facebook Comments

Sri Raghav

Admin