ರಾತ್ರೋರಾತ್ರಿ ಕಬಿನಿಯಿಂದ ತಮಿಳುನಾಡಿಗೆ ಹರಿದ ನೀರು : ರೈತರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜು.20-ರಾತ್ರೋರಾತ್ರಿ ಕಬಿನಿ ಜಲಾಶಯದಿಂದ ಮೂರು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿಸಲಾಗಿದ್ದು, ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಬಿನಿ ಜಲಾಶಯದ ವ್ಯಾಪ್ತಿಯ ರೈತರ ಬೆಳೆಗೆ ಈವರೆಗೆ ನೀರು ಬಿಟ್ಟಿಲ್ಲ. ಆದರೆ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಡುವ ಅಗತ್ಯವೇನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಮಧ್ಯರಾತ್ರಿ ಖಾಸಗಿ ಕಂಪನಿ ಗೇಟ್ ಮೂಲಕ ನೀರು ಬಿಡಲಾಗಿದ್ದು, ಹಲವು ಅನುಮಾನ ಮೂಡಿಸಿದೆ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.
ಕಬಿನಿ ಇನ್ನೂ ಭರ್ತಿಯಾಗಿಲ್ಲ ಹಾಗಿದ್ದರೂ ನೀರು ಬಿಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಜಲಾಶಯದ ಬಳಿ ಇರುವ ಸುಭಾಷ್ ಪವರ್ ಕಂಪನಿಯಲ್ಲಿ ತಮಿಳಿಗರೇ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿಗೆ ಈ ಕಂಪನಿಯ ಗೇಟ್ ಮೂಲಕ ನೀರು ಹರಿಸಲಾಗಿದೆ. ತಕ್ಷಣದಿಂದಲೇ ನೀರು ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಜಲಾಶಯ ಭರ್ತಿಯಾಗಲು ಇನ್ನೂ 14 ಅಡಿ ಬಾಕಿ ಇದೆ. ನಿನ್ನೆ 70 ಅಡಿ ನೀರಿತ್ತು. ಇಂದು ಒಂದು ಅಡಿ ನೀರು ಕಡಿಮೆಯಾಗಿದೆ. ಒಂದೇ ರಾತ್ರಿಯಲ್ಲಿ ಇಷ್ಟೊಂದು ನೀರು ಬಿಟ್ಟಿರುವುದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದ್ದಾರೆ. ಈ ಕೂಡಲೇ ಕಬಿನಿ ಬಲದಂಡೆ ಮೂಲಕ ಈ ಭಾಗದ ರೈತರ ಬೆಳೆಗೆ ನೀರು ಹರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Facebook Comments