ಕಬ್ಜ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ ಆರ್.ಜಿ.ವಿ.

ಈ ಸುದ್ದಿಯನ್ನು ಶೇರ್ ಮಾಡಿ

ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರದಲ್ಲಿ ಉಪೇಂದ್ರ ಇದೇ ಮೊದಲಬಾರಿಗೆ ಸ್ವಾತಂತ್ರಾ ನಂತರದ ಸಮಯದಲ್ಲಿ ಭೂಗತ ಲೋಕವನ್ನಾಳುವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.  ನಟ ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಉಪ್ಪಿ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಲು ನಿರ್ದೇಶಕ ಆರ್.ಚಂದ್ರು ಅವರು ಮುಂದಾಗಿದ್ದಾರೆ.

ಕಬ್ಜ ಚಿತ್ರದ ಅಫಿಶಿಯಲ್ ಥೀಮ್ ಪೋಸ್ಟರ್ ಮತ್ತು ಟೈಟಲನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಾದ ರಾಮ್‍ಗೋಪಾಲ್ ವರ್ಮಾ ಅವರು ನಿನ್ನೆ ಲೀಲಾ ಪ್ಯಾಲೆಸ್‍ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದರು. ಆರ್‍ಜಿವಿ ಅವರು ಕಬ್ಜ ಚಿತ್ರದ ಥೀಮ್ ಪೋಸ್ಟರನ್ನು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಒರಿಯಾ ಹಾಗೂ ಮರಾಠಿ ಸೇರಿದಂತೆ ದೇಶದ ಏಳು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದು, ಅದು ಯೂ ಟ್ಯೂಬ್ ಚಾನೆಲ್‍ನಲ್ಲಿ ಭಾರೀ ವೈರಲ್ ಆಗಿ ಸದ್ದು ಮಾಡುತ್ತಿದೆ. ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆಗೂ ಕಬ್ಜ ಸೇರ್ಪಡೆಯಾಗಿದೆ.

ಕಳೆದ ಆರು ತಿಂಗಳಿಂದ ಸ್ಥಬ್ದವಾಗಿದ್ದ ಚಿತ್ರರಂಗ ಈಗ ಹಂತ ಹಂತವಾಗಿ ಆರಂಭವಾಗುತ್ತಿದ್ದು, ಕಬ್ಜ ಚಿತ್ರತಂಡ ಕೂಡಾ ಚಿತ್ರೀಕರಣ ಆರಂಭಿಸಲು ರೆಡಿಯಾಗಿದೆ.  ಇದಕ್ಕಾಗಿಯೇ ಮಿನರ್ವಮಿಲ್ ಆವರಣದಲ್ಲಿ 1947ರ ಕಾಲದಲ್ಲಿದ್ದ ಸ್ಟ್ರೀಟ್‍ಗಳು, ಮನೆಗಳು, ಆಸ್ಪತ್ರೆಗಳು, ಡಾನ್‍ಗಳ ಅಡ್ಡಾ ಮುಂತಾದವುಗಳನ್ನು ಒಳಗೊಂಡ ಸೆಟ್ ನಿರ್ಮಿಸಲಾಗುತ್ತಿದೆ.

ಲಾಕ್‍ಡೌನ್‍ಗೂ ಮೊದಲೇ ಈ ಸೆಟ್ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಆದರೆ ಅದೇ ಸಮಯದಲ್ಲಿ ಕರೋನಾ ಲಾಕ್‍ಡೌನ್ ಆಗಿ ಕೆಲಸಗಳೆಲ್ಲ ಅರ್ಧಕ್ಕೇ ನಿಂತಿತ್ತು. ತುಂಬಾ ಗ್ಯಾಪ್ ಆಗಿದ್ರಿಂದ ಹಾಕುತ್ತಿದ್ದ ಸೆಟ್ ಪ್ರಾಪರ್ಟಿ ಮಳೆ ಗಾಳಿಗೆ ಸಿಲುಕಿ ಕೊಲ್ಯಾಪ್ಸ್ ಆಗಿತ್ತು.

ಈಗ ಮತ್ತೊಮ್ಮೆ ಸೆಟ್‍ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಬಹು ತೇಕ ಅಂತಿಮ ಹಂತ ತಲುಪಿದೆ.  ಇತ್ತೀಚೆಗಷ್ಟೇ ಕಬ್ಜ ಚಿತ್ರದ ಅಧಿಕೃತ ಮಾಹಿತಿಗಳನ್ನು ಒಳಗೊಂಡ ವೆಬ್‍ಸೈಟನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಬಿಡುಗಡೆ ಮಾಡಿದ್ದರು.  ಈಗ ಚಿತ್ರದ ಥೀಮ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ಉಪೇಂದ್ರ 80ರ ದಶಕದ ಡಾನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲೇ ಮೂಡಿಬರಲಿದೆ. ಇಂಥ ಚಿತ್ರಗಳನ್ನು ಬಹುತೇಕ ಸೆಟ್‍ನಲ್ಲೇ ಚಿತ್ರೀಕರಣ ಮಾಡಬೇಕಾಗಿದ್ದು, ಇಲ್ಲಿ ಚಿತ್ರದ ಬಜೆಟ್ ಕೂಡ ತುಂಬಾ ದೊಡ್ಡ ಮಟ್ಟದಲ್ಲಿರುತ್ತದೆ.

ನಿಜಕ್ಕೂ ಕಬ್ಜ ಚಿತ್ರವನ್ನು ಯಾವುದೇ ಬಾಲಿವುಡ್ ಸ್ಟಾರ್ ಚಿತ್ರಕ್ಕೂ ಕಮ್ಮಿ ಇಲ್ಲದಂತೆ ಚಂದ್ರು ಅವರು ಅದ್ಧೂರಿ ಬಜೆಟ್‍ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ದೇಶದ ಏಳು ಭಾಷೆಗಳಲ್ಲಿ ಕಬ್ಜ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಆರ್.ಚಂದ್ರು ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ.

ಇನ್ನು ಈ ಚಿತ್ರದ ನಾಯಕಿಯಾಗಿ ದಕ್ಷಿಣ ಭಾರತದ ಹೆಸರಾಂತ ನಟಿಯೊಬ್ಬರು ಕಾಣಿಸಿಕೊಳ್ಳಲಿದ್ದು, ಅವರು ಯಾರಂತ ಸದ್ಯದಲ್ಲೆ ಚಂದ್ರು ಅವರೇ ಬಹಿರಂಗ ಪಡಿಸಲಿದ್ದಾರೆ. ಇನ್ನು ಈ ಚಿತ್ರದ ನಿರ್ಮಾಣ ಕಾರ್ಯದಲ್ಲಿ ಚಂದ್ರು ಅವರ ಜೊತೆ ಎಂದಿನಂತೆ ಮುನೀಂದ್ರ ಕೆ.ಪುರ ಅವರೂ ಕೈಜೋಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ಅವರ ಸಹಕಾರ ಈ ಚಿತ್ರಕ್ಕೆ ಇದೆ. ಸದ್ಯ ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಹೆಚ್ಚಿನ ಮಾಹಿತಿ ಗಳನ್ನು ತಂಡ ನೀಡಲಿದೆಯಂತೆ.

Facebook Comments