`ಕಬ್ಜ’ ವೆಬ್‍ಸೈಟ್ ಲಾಂಚ್

ಈ ಸುದ್ದಿಯನ್ನು ಶೇರ್ ಮಾಡಿ

ಚಂದನವನದಲ್ಲಿ ಚಿತ್ರ ಚಟುವಟಿಕೆಗಳ ಕೆಲಸ ಚುರುಕುಗೊಂಡಿದೆ. ಆ ನಿಟ್ಟಿನಲ್ಲಿ ಕಬ್ಜ ಚಿತ್ರ ಈಗ ಭಾರೀ ಸದ್ದನ್ನು ಮಾಡುತ್ತಿದೆ.ಬೆಳ್ಳಿ ಪರದೆಯ ಮೇಲೆ ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದವರು ಉಪೇಂದ್ರ. ದಶಕಗಳ ಹಿಂದೆಯೇ `ಓಂ, ಉಪೇಂದ್ರ ‘ದಂಥ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದರು.

ಇದೀಗ ಅವರನ್ನೇ ಡೈರೆಕ್ಟ್ ಮಾಡುತ್ತಿರುವ ನಿರ್ದೇಶಕ ಆರ್.ಚಂದ್ರು ಉಪೇಂದ್ರ ಅವರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಸಿನಿಮಾ ಮಾಡುತ್ತಿದ್ದಾರೆ. ಹೌದು ಆರ್.ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಬ್ಜ ಚಿತ್ರವು ಯಾವ ಹಾಲಿವುಡ್ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ನಿರ್ಮಾಣವಾಗುತ್ತಿದೆ.

ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಳ್ಳುತ್ತಿದ್ದು, ಉಳಿದ ನಾಲ್ಕು ಭಾಷೆಗೆ ಡಬ್ ಆಗಲಿದೆ. ಮುಂಚಿನಿಂದಲೂ ಆರ್.ಚಂದ್ರು ಅವರ ಸಿನಿಮಾಗಳೆಂದರೆ ಅಲ್ಲೊಂದು ಫ್ಯಾಷನ್ ಇರುತ್ತೆ, ಅದು ಕ್ಲಾಸ್ ಚಿತ್ರ ಆಗಲಿ, ಮಾಸ್ ಚಿತ್ರ ಆಗಲಿ, ಅಲ್ಲಿ ಅದ್ಧೂರಿತನವೇ ಮೈವೆತ್ತಂತಿರುತ್ತದೆ.

ಆರ್.ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ನಿನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಕಬ್ಜ, ಆರಂಭದಿಂದಲೂ ತನ್ನ ಹಲವಾರು ವಿಶೇಷತೆಗಳಿಂದ ಸುದ್ದಿ ಮಾಡುತ್ತಲಿದೆ. ಅದ್ಭುತವಾದ ರೆಟ್ರೋ ಸ್ಟೈಲ್ ಕಥೆ, ಅದ್ದೂರಿಯಾದ ಮೇಕಿಂಗ್‍ನೊಂದಿಗೆ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ಸದ್ದು ಮಾಡುತ್ತಿರುವ ಕಬ್ಜ ಚಿತ್ರದ ವೆಬ್‍ಸೈಟ್ ಇದೀಗ ಅನಾವರಣಗೊಂಡಿದೆ.

ಬೆಂಗಳೂರಿನ ಶೆರ್ಟಾನ್ ಹೊಟೇಲಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ನಟ ಉಪೇಂದ್ರ, ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ವಿತರಕ ಮೋಹನ್, ಡಾ.ಸೌಜನ್ಯ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನುಶ್ರೀ ಅಂದವಾಗಿ ನಿರೂಪಿಸಿಕೊಟ್ಟರು.

ಆರ್.ಚಂದ್ರು ಯಾವುದೇ ಕಾರ್ಯಕ್ರಮವನ್ನು ಮಾಡಿದರೂ ಅಲ್ಲೊಂದು ಪಾಸಿಟಿವ್ ಎನರ್ಜಿ ಸುಳಿದಾಡುವಂತೆ ನೋಡಿಕೊಳ್ಳುತ್ತಾರೆ. ಅದು ಅವರ ಭರವಸೆಯ ಮಾತುಗಳಿಂದಲೇ ಪ್ರವಹಿಸುತ್ತೆ. ಈ ಬಾರಿಯೂ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಘನತೆಯನ್ನ ಪ್ರತಿಫಲಿಸುವ ಮಾತುಗಳನ್ನಾಡಿದ್ದಾರೆ.

ಉಪ್ಪಿಯ ಜೊತೆಗೂಡಿ ದೇಶಾದ್ಯಂತ ಗೆಲುವು ದಾಖಲಿಸೋ ಹುರುಪನ್ನೂ ಹೊರ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಚಂದ್ರು ಅವರಿಗೆ ಬೆನ್ನೆಲುಬಾಗಿ ನಿಂತಿರುವ ರಾಜಕಾರಣಿ ಎಂಟಿಬಿ ನಾಗರಾಜ್ ಮಾತನಾಡುತ್ತ ನಾನು ಚಿಕ್ಕಂದಿನಿಂದಲೂ ರಾಜ್‍ಕುಮಾರ್ ಅವರ ಅಭಿಮಾನಿ, ಅವರ ಸಿನಿಮಾಗಳನ್ನು ಇಷ್ಟಪಟ್ಟು ನೋಡುತ್ತಿದ್ದೆ, ಒಂದು ಸಿನಿಮಾ ಸಮಾರಂಭದಲ್ಲಿ ಅವರ ಜೊತೆ ನಾನು ಭಾಗವಹಿಸಿದ್ದ ಫೆÇೀಟೋ ಈಗಲೂ ನನ್ನ ಬಳಿಯಲ್ಲಿದೆ.

ಇದೀಗ ಅವರ ಮಗ ತಂದೆಯ ಹೆಸರನ್ನು ಉಳಿಸಿದ್ದಾರೆ, ಚಂದ್ರು ತಾನು ಮಾಡುತ್ತಿರುವ ಸಿನಿಮಾ ಬಗ್ಗೆ ತುಂಬಾ ಕನಸು ಕಟ್ಟಿಕೊಂಡಿದ್ದಾರೆ. ಅವರು ಅಂದುಕೊಂಡಿದ್ದನ್ನು ಖಂಡಿತಾ ಸಾಧಿಸಿ ತೋರಿಸುತ್ತಾರೆ ಎಂದು ವಿಶ್ವಾಸದಿಂದಲೇ ಹೇಳಿದರು. ಚಂದ್ರು ಮಾತನಾಡುತ್ತ ಕಬ್ಜ ಚಿತ್ರದ ಶೇ 50ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಮಿನರ್ವ ಮಿಲ್‍ನಲ್ಲಿ ಒಂದೂವರೆ ಕೋಟಿ ವೆಚ್ಚದಲ್ಲಿ 1947ರ ಕಾಲಘಟ್ಟವನ್ನು ಮರುಸೃಷ್ಟಿ ಮಾಡಿದ್ದೆವು. ಆದರೆ ಕರೋನಾ ಲಾಕ್‍ಡೌನ್ ಕಾರಣದಿಂದ ಶೂಟಿಂಗ್ ಮಾಡಲಾಗಲಿಲ್ಲ, ತುಂಬಾ ಗ್ಯಾಪ್ ಆಗಿ ಇಡೀ ಸೆಟ್ ಹಾಳಾಗಿದ್ದು, ಈಗ ಮತ್ತೆ ಸೆಟ್‍ನ್ನು ರೀ ಕನ್‍ಸ್ಟ್ರಕ್ಷನ್ ಮಾಡುತ್ತಿದ್ದು, ಸೆಪ್ಟೆಂಬರ್ 20ರ ನಂತರ ಶೂಟಿಂಗ್ ಆರಂಭಿಸುತ್ತಿದ್ದೇವೆ.

ಚಿತ್ರದ ನಾಯಕಿಯಾಗಿ ಭಾರತೀಯ ಚಿತ್ರರಂಗದ ಖ್ಯಾತ ನಟಿಯೊಬ್ಬರು ನಟಸುತ್ತಿದ್ದು, ಅವರ ಹೆಸರನ್ನು ಶೂಟಿಂಗ್‍ಗೆ ಬಂದ ಮೇಲೆಯೇ ಬಹಿರಂಗಪಡಿಸುವುದು ಎಂದು ಅಗ್ರಿಮೆಂಟ್ ಆಗಿದೆ ಎಂದು ಕಬ್ಜ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.

ಈಗಾಗಲೇ ಕಬ್ಜ ಚಿತ್ರವು ದೇಶದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಅದು ಈ ಚಿತ್ರ ಮತ್ತು ಆರ್.ಚಂದ್ರು ಅವರ ಪರಿಶ್ರಮದ ಪ್ರತೀಕ ಎಂದು ಶಿವಣ್ಣ ಮೆಚ್ಚಿಕೊಂಡಿದ್ದಾರೆ.
ಇದೇ ಹೊತ್ತಿನಲ್ಲಿ ಚಂದ್ರು ಅವರ ಅದ್ದೂರಿ ತನ, ಸಮರ್ಪಣಾ ಭಾವಗಳನ್ನೂ ಶಿವಣ್ಣ ಮೆಚ್ಚಿಕೊಂಡಿದ್ದಾರೆ.

ಈಹಿಂದೆ ಚಂದ್ರು ಜೊತೆ ಮಾಡಿದ್ದ ಐ ಲವ್ ಯೂ ಚಿತ್ರ ಸಾಧಿಸಿದ ಗೆಲುವಿನ ಖುಷಿ, ಕಬ್ಜ ಚಿತ್ರದ ಮೂಲಕ ಮತ್ತೊಮ್ಮೆ ಚಂದ್ರು ಅವರ ಜೊತೆ ಕೆಲಸ ಮಾಡುತ್ತಿರುವ ಥ್ರಿಲ್‍ನೊಂದಿಗೆ ಉಪ್ಪಿ ಕೂಡಾ ಮಾತಾಡಿದ್ದಾರೆ. ಕೊರೊನಾ ಭೀತಿಯ ನಡುವೆಯೂ ಪಂಚತಾರಾ ಹೋಟೆಲ್‍ನಲ್ಲಿ ನಡೆದ ಕಬ್ಜ ಚಿತ್ರದ ವೆಬ್‍ಸೈಟ್ ಅನಾವರಣ ಕಾರ್ಯಕ್ರಮ ಕನ್ನಡ ಚಿತ್ರರಂಗಕ್ಕೆ ಹೊಸ ಸೂರ್ತಿ ನೀಡಿದೆ.

Facebook Comments