ಬಸವನಗುಡಿಯಲ್ಲಿ ಗ್ರಾಮೀಣ ಸೊಗಡಿನ ಕಡಲೆಕಾಯಿ ಪರಿಷೆ

ಈ ಸುದ್ದಿಯನ್ನು ಶೇರ್ ಮಾಡಿ

ಕಾರ್ತೀಕ ಮಾಸದ ದೀಪಗಳಡಿ ರಾಶಿ ರಾಶಿ ಕಡಲೆಕಾಯಿ, ನೂರಾರು ಮೈಲಿಗಳಿಂದ, ನೂರಾರು ಹೊಲಗಳಿಂದ ಬಂದ ಕಡಲೆಕಾಯಿಯ ರಾಶಿಯ ಸೊಬಗು ನೋಡಬೇಕೆ? ಹಾಗಿದ್ದರೆ ಬನ್ನಿ, ಬಸವನಗುಡಿ ಕಡಲೆಕಾಯಿ ಜಾತ್ರೆಗೆ. ಬಸವನಗುಡಿ ಕಡಲೆಕಾಯಿ ಪರಿಷೆಗೆ ತನ್ನದೇ ಆದ ಛಾಪು ಇದೆ. ಕಾರ್ತೀಕ ಮಾಸದ ಕೊನೆ ಸೋಮವಾರದ ಹಿಂದು ಮುಂದಿನ ದಿನಗಳಲ್ಲಿ ಬಸವನಗುಡಿಯ ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ದಿಬ್ಬ ನೋಡುಗರ ಕಣ್ಣಿಗೆ ಹಬ್ಬ. ನಗರದ ಜಂಜಾಟದಲ್ಲೂ ಹಳ್ಳಿಯ ಸೊಗಡನ್ನು ಸವಿಯಬೇಕು ಅಂತಿದ್ದರೆ ತಪ್ಪದೆ ಈ ಪರಿಷೆಗೆ ಹೋಗಲೇಬೇಕು.

ಬರೀ ಕಡಲೆಕಾಯಿಗಷ್ಟೇ ಸೀಮಿತ ಅಲ್ಲ ಈ ಜಾತ್ರೆ. ನಿಮ್ಮ ಮೆಚ್ಚಿನ ಖಾರಾ ಮಂಡಕ್ಕಿ, ಬಣ್ಣ ಬಣ್ಣದ ದೀಪಗಳು, ಚಿಣ್ಣರ ಕಣ್ ಸೆಳೆಯುವ ಬೊಂಬೆಗಳು, ಆಟಿಕೆಗಳು ಒಂದೇ ಎರಡೇ! ಎಪಿಎಸ್ ಕಾಲೇಜು ಬದಿಯಿಂದ ರಾಮಕೃಷ್ಣ ಚೌಕದವರೆಗೆ ಒಮ್ಮೆ ಹಾದು ಬಂದರೆ ಸಾಕು, ಹಳ್ಳಿ ಜಾತ್ರೆಯ ದಿವ್ಯ ಅನುಭವ ಬರುತ್ತದೆ.

ಕಡಲೆಕಾಯಿ ಪರಿಷೆಯಲ್ಲಿ ಹಸಿ, ಬೇಯಿಸಿದ, ಹುರಿದ ಕಡಲೆಕಾಯಿ ಎಲ್ಲವೂ ಲಭ್ಯ. ಬೆಂಗಳೂರಿನ ಮಾವಳ್ಳಿ, ಸುಂಕೇನಹಳ್ಳಿ, ಹೊಸಹಳ್ಳಿ, ಕೋಲಾರದ ಚಿಂತಾಮಣಿ ಯಿಂದ, ಆಂಧ್ರದ ಕಡೆಯಿಂದಲೂ ತಮಿಳು ನಾಡಿನ ಧರ್ಮಪುರಿಯಿಂದಲೂ ಬಂದ ವಿವಿಧ ಕಡಲೆಕಾಯಿಯನ್ನು ನೋಡಬಹುದು, ಸವಿಯಲೂಬಹುದು. ಕಡಲೆಕಾಯಿಯೊಂದಿಗೆ ಸವಿ ಬೆರೆಸಲು ಆಲೆಮನೆಯಿಂದ ನೇರವಾಗಿ ಬಂದ ಬೆಲ್ಲದಚ್ಚುಗಳು, ಬೆಲ್ಲದುಂಡೆಗಳು, ತಿಪಟೂರಿನ ಕೊಬ್ಬರಿ ಚೂರು ಇದ್ದೇ ಇರುತ್ತದೆ.
ಬೆಂಗಳೂರಿನ ಈಗಿನ ಬಸವನಗುಡಿ ಈ ಹಿಂದೆ ಅನೇಕ ಹಳ್ಳಿಗಳ ಜÁಗವಾಗಿತ್ತು. ಇಲ್ಲಿನ ಪ್ರಮುಖ ಬೆಳೆ ಕ

ಡಲೆಕಾಯಿ ಅರ್ಥಾತ್ ಶೇಂಗಾ, ನೆಲಗಡಲೆ ಆಗಿತ್ತು. ಸಮೃದ್ಧವಾಗಿ ಬೆಳೆದು ನಿಂತ ಕಡಲೆಕಾಯಿ ಬೆಳೆಯನ್ನು ಗೂಳಿಯೊಂದು ಹಾಳು ಮಾಡುತ್ತಿತ್ತು. ಇದರ ಉಪಟಳ ತಾಳದೆ ರೈತರು ಸಭೆ ಸೇರಿ, ಗೂಳಿಯನ್ನು ಓಡಿಸುವುದಕ್ಕೆ ಪ್ಲಾನ್ ಮಾಡಿದರು. ಬೆಳೆಗೆ ಬಾಯಿ ಹಾಕಿದ ಗೂಳಿಯನ್ನು ಊರು ಜನರು ಅಟ್ಟಿಸಿಕೊಂಡು ಹೊರಟರು. ರೈತರಿಂದ ತಪ್ಪಿಸಿಕೊಂಡು ಬಂದ ಗೂಳಿ ಸುಂಕೇನಹಳ್ಳಿ ಸಮೀಪದ ಬೆಟ್ಟ ಏರಿ ಕಲ್ಲಾಯಿತು.

ಅದನ್ನು ಕಣ್ಣಾರೆ ಕಂಡ ರೈತರು ಇದು ಸಾಮಾನ್ಯ ಗೂಳಿಯಲ್ಲ, ಶಿವನ ವಾಹನ ನಂದಿ ಎಂದು ನಂಬಿದರು. ತಾವು ಮಾಡಿದ ತಪ್ಪಿಗಾಗಿ ರೈತರು ಪ್ರತಿವರ್ಷವೂ ಬೆಳೆದ ಕಡಲೆಕಾಯಿಯನ್ನು ಬಸವನಿಗೆ ಅರ್ಪಿಸಿ ತಾವು ಮಾಡಿದ ತಪ್ಪನ್ನು ಮನ್ನಿಸು ಎಂದು ಬೇಡಿದರು. ಅಂದಿನಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಈ ಕಡಲೆಕಾಯಿ ಪರಿಷೆಗೆ ರೈತರು ಬೆಳೆದ ಕಡಲೆಕಾಯಿ ಬೆಳೆಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಿದೆ.

ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ, ಇದು ನಮ್ಮ ಸಂಸ್ಕøತಿಯ ಭಾಗವಾಗಿರುವುದರಿಂದ ಭಕ್ತರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪಾರಕ್ಕೆ ಮಾರುಕಟ್ಟೆ ದೊರೆಯುತ್ತದೆ.

ಕಡಲೆಕಾಯಿ ಜತೆಗೆ ಶೇಂಗಾದಿಂದ ಮಾಡಲ್ಪಡುವ ಕಡಲೆಕಾಯಿ ಮಿಠಾಯಿ, ಬರ್ಫಿ, ಮಸಾಲೆ ಹಚ್ಚಿದ ಕಡಲೆಕಾಳು ಸೇರಿದಂತೆ ಬಗೆಬಗೆಯ ಕಡಲೆಕಾಯಿ ಪದಾರ್ಥಗಳು ಈ ಪರಿಷೆಯಲ್ಲಿ ಸಿಗುತ್ತವೆ. ಮತ್ತೊಂದು ನಂಬಿಕೆ: ನಂದಿ ಕುರಿತಾದ ಮತ್ತೊಂದು ಪ್ರಚಲಿತ ನಂಬಿಕೆ ಎಂದರೆ, ಅಂದು ಐಕ್ಯನಾದ ಬಸವ ಕಲ್ಲಾಗಿದ್ದಷ್ಟೇ ಅಲ್ಲ, ಹಾಗೆಯೇ ಬೆಳೆಯತೊಡಗಿದ್ದ.

ಅದು ಯಾವ ಪರಿ ಎಂದರೆ 15 ಅಡಿ ಎತ್ತರ, 20 ಅಡಿ ಅಗಲದಷ್ಟು ಬೃಹತ್ತಾಗಿ ಬೆಳೆದು ನಿಂತ. ಇನ್ನೂ ಬೆಳೆದರೆ ಪೂಜಿಸಲು ಕಷ್ಟವಾಗುತ್ತದೆಂದು ರೈತರೆಲ್ಲ ಸೇರಿ ಬಸವಣ್ಣನ ತಲೆಯ ಮೇಲೆ ಮೊಳೆ ಹೊಡೆಯುತ್ತಾರೆ. ಅಲ್ಲಿಂದ ಬಸವಣ್ಣ ಬೆಳೆಯುವುದನ್ನು ನಿಲ್ಲಿಸಿದ ಎಂದು ಉಲ್ಲೇಖವಿದೆ.

ಅನಂತರ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು 1537ರಲ್ಲಿ ಬಸವನಿಗೆ ದೇವಾಲಯವನ್ನು ಕಟ್ಟಿಸಿದರು. ಈ ದೇವಸ್ಥಾನದಿಂದಾಗಿಯೇ ಬೆಂಗಳೂರು ಮಹಾನಗರದ ಪ್ರತಿಷ್ಠಿತ ಈ ಬಡಾವಣೆಗೆ ಬಸವನಗುಡಿ ಎಂಬ ಹೆಸರು ಬಂದಿದೆ.
ಕಡಲೆಕಾಯಿ ಪರಿಷೆ: ಬಸವನಷ್ಟೇ ಮಹತ್ವ ಕಡಲೆಕಾಯಿ ಪರಿಷೆಗೂ ಇದೆ. ಪ್ರತಿ ವರ್ಷ ಕಡೆಯ ಕಾರ್ತೀಕ ಸೋಮವಾರ, ಮಂಗಳವಾರ, ಬುಧವಾರ ಈ ಕಡಲೆಕಾಯಿ ಪರಿಷೆ ನಡೆಯುತ್ತದೆ. ಕಡಲೆಕಾಯಿ ಪರಿಷೆ ಮೂರು ದಿನಗಳ ಕಾಲ ನಡೆಯುತ್ತದೆ. ಮೊದಲ ದಿನದ ಪರಿಷೆಯನ್ನು ಚಿಕ್ಕ ಪರಿಷೆ ಎನ್ನುತ್ತಾರೆ.

ಕಡಲೆಕಾಯಿ ಮಾರುವುದಕ್ಕಿಂತ ಮುಂಚೆ ಬಸವನಿಗೆ ಕಡಲೆಕಾಯಿಯನ್ನೇ ಪ್ರಸಾದವಾಗಿ ನೀಡುವುದು ವಾಡಿಕೆ. ಹೀಗೆ ಮಾಡುವುದರಿಂದ ಮುಂದಿನ ಬೆಳೆಗಳು ಹುಲುಸಾಗಿ ಬರಲಿದೆ ಎಂಬ ನಂಬಿಕೆ ರೈತರದ್ದು. ಅಂದು ಬಸವನಿಗೆ ವಿಶೇಷವಾದ ಅಲಂಕಾರದ ಜತೆಗೆ ಇಡೀ ದೇವಸ್ಥಾನವನ್ನು ದೀಪಗಳಿಂದ ಕಂಗೊಳಿಸುವಂತೆ ಮಾಡಿರುತ್ತಾರೆ.

ಈ ಜಾತ್ರೆಯಲ್ಲಿ ಭಕ್ತರು ಕಡಲೆ ತಿಂದರೆ ಬಸವ ತೃಪ್ತನಾಗುತ್ತಾನೆ ಎಂಬ ಕಾರಣಕ್ಕಾಗಿ ಲಕ್ಷಾಂತರ ಜನರು ಈ ಜಾತ್ರೆಗೆ ಆಗಮಿಸಿ ಸಂಭ್ರಮಿಸುತ್ತಾರೆ. ಬಿಸಾಕಿದ ಕಡಲೆಕಾಯಿ ಸಿಪ್ಪೆಯನ್ನು ರಾತ್ರಿ ವೇಳೆ ಕಲ್ಲು ಬಸವ ನಿಜ ರೂಪ ತಾಳಿ ತಿನ್ನುತ್ತಾನೆ ಎಂಬ ನಂಬಿಕೆಯೂ ಭಕ್ತರಲ್ಲಿದೆ.

# ಕಡಲೆಕಾಯಿಯೂ ಆಧ್ಯಾತ್ಮವೂ: ನಾಥ ಮತ್ತು ಸಿದ್ಧ ಸಂಪ್ರದಾಯದಲ್ಲಿ ಶಿವನ ವಾಹನ ನಂದಿಯನ್ನೂ ಗುರುವೆಂದು ಪರಿಗಣಿಸುತ್ತಾರೆ. ಉದಾಹರಣೆಗೆ ಸಿದ್ಧ ತಿರುಮೂಲನಾಥರ್, ಪತಂಜಲಿನಾಥರ್ ಅವರ ಗುರುವೇ ನಂದೀಶನಾಗಿದ್ದಾನೆ. ಯೋಗಶಾಸ್ತ್ರದ ಪ್ರಕಾರ, ನಂದಿ ಅಥವಾ ನಂದಿಕೇಶ್ವರನು ಶಿವನ ಶಿರೋಭಾಗವನ್ನು ಪ್ರತಿನಿಧಿಸುತ್ತಾನೆ ಅಂದರೆ ಅವನದು ಪರಿಪೂರ್ಣ ವ್ಯಕ್ತಿತ್ವ. ಶಿವನನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಮೊದಲು ನಂದಿಯನ್ನು ಅರ್ಥಮಾಡಿಕೊಳ್ಳಬೇಕು. ಅವನಲ್ಲಿರುವ ಜ್ಞಾನವನ್ನು ಮನನ ಮಾಡಿಕೊಳ್ಳಬೇಕು ಎಂಬುದಾಗಿದೆ.

ನಂದಿಯೊಳಗೆ ಪರಿಪೂರ್ಣ ಗುರುವಿನ ಅವತಾರವಿದೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ನಂದಿಯು ವ್ಯಕ್ತಿಯ ಜೀವದ ಪ್ರತಿನಿಧಿ. ಜೀವನಿಂದ ಹೊರಬರುವ ಸಂದೇಶವು ಆತ್ಮ (ಪರಮಾತ್ಮ)ನಲ್ಲೇ ಪ್ರತಿಷ್ಠಿತವಾಗಿರುವಂತೆ ನಂದಿಯ ದೃಷ್ಟಿಯು ಸದಾ ಪರಮೇಶ್ವರನಲ್ಲೇ ನೆಟ್ಟಿರುತ್ತದೆ. ನಂದಿಗೆ ಪ್ರಿಯವಾದ ಕಡಲೆಕಾಯಿ ಪೌಷ್ಠಿಕಾಂಶದ ದೃಷ್ಟಿಯಿಂದಲೂ ಪರಿಪೂರ್ಣ ಆಹಾರ. ಗಿಡದ ಬುಡದಲ್ಲಿ ಸುಪ್ತವಾಗಿ ಹರಡಿಕೊಳ್ಳುವ ಕಡಲೆಕಾಯಿಯಂತೆ ಆಧ್ಯಾತ್ಮದ ಸಾರವೂ ಸುಪ್ತವಾಗಿರುತ್ತದೆ. ಗೊಂಚಲಾದ ಬಳ್ಳಿಯಲ್ಲಿ ಉತ್ತಮವಾದುದ್ದದ್ದನ್ನೇ ಆಯ್ಕೆ ಮಾಡಿಕೊಳ್ಳಬೇಕು.

ಸಹನೆಯಿಂದ, ಶ್ರದ್ಧೆಯಿಂದ ಗಡುಸಾದ ಹೊರ ಕವಚವನ್ನು ಬಿಡಿಸಿದಾಗ ಮಾತ್ರ ಫಲ ದೊರೆಯುತ್ತದೆ. ನಿಗೂಢ ಅಂತರಾರ್ಥ ಹೊಂದಿದ ವೇದಗಳೂ ಮೇಲ್ನೋಟಕ್ಕೆ ಕಡಲೆಕಾಯಿ ಸಿಪ್ಪೆಯಷ್ಟು ಜಟಿಲ. ಶ್ರದ್ಧೆಯಿಂದ ಬಿಡಿಸಿದಷ್ಟು ಅದರ ಸಾರ ಸಿಗುತ್ತದೆ. ಮನಸ್ಸು ಸಂತೃಪ್ತಗೊಳ್ಳುತ್ತದೆ. ಈ ಬಾರಿಯ ಕಡಲೆಕಾಯಿ ಪರಿಷೆಗೆ ಭರ್ಜರಿ ಸಿದ್ಧತೆ ಮಾಡಲಾಗಿದ್ದು, ದೂರದೂರುಗಳಿಂದ ಕಡಲೆಕಾಯಿ ಮಾರಾಟ ಮಾಡುವವರು ಆಗಮಿಸಿದ್ದಾರೆ.

Facebook Comments