ಅಧಿಕಾರಿಗಳಿಂದ ಬೆಳೆ ಹರಾಜಿನ ಪರಿಶೀಲನೆ ನಡೆಸಲು ಸ್ಪೀಕರ್ ಕಾಗೇರಿ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.29- ತೋಟಗಾರಿಕೆ ಬೆಳೆಗಳ ಹರಾಜು ಕಡಿಮೆ ದರಕ್ಕೆ ಆಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಸಲಹೆ ಮಾಡಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಪ್ರಶ್ನೆಗೆ ತೋಟಗಾರಿಕೆ ಸಚಿವ ಆರ್.ಶಂಕರ್ ಅವರ ಪರವಾಗಿ ಡಿಸಿಎಂ ಅಶ್ವತ್ಥನಾರಾಯಣ ಅವರು ಉತ್ತರಿಸುತ್ತಿದ್ದಾಗ ಸಭಾಧ್ಯಕ್ಷರು ಈ ಸಲಹೆ ಮಾಡಿದರು.

ಅದಕ್ಕೆ ಸಮ್ಮತಿಸಿದ ಡಿಸಿಎಂ ಅಶ್ವತ್ಥನಾರಾಯಣ ಅವರು ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸುವ ಭರವಸೆ ನೀಡಿದರು. ತೋಟಗಾರಿಕೆ ಇಲಾಖೆಯಲ್ಲಿ ಪಾರದರ್ಶಕ ಕಾಯ್ದೆ ಉಲ್ಲಂಘಿಸಿಲ್ಲ. ಟೆಂಡರ್ ಮತ್ತು ಫಸಲಿನ ಮಾರಾಟವನ್ನುಕಾಯ್ದೆ ಪ್ರಕಾರವೇ ಮಾಡಲಾಗುತ್ತಿದೆ ಎಂದು ಸಮರ್ಥಿಸಿ ಕೊಂಡರು. ಆದರೆ, ಪ್ರಶ್ನೆ ಕೇಳಿದ ಶಾಸಕರು, ಹುಣಸೂರು ಕ್ಷೇತ್ರದಲ್ಲಿ ಒಂದು ಕೋಟಿ ಮೊತ್ತದ ಕಾಮಗಾರಿ ಯನ್ನು ನೇರವಾಗಿ ನಿರ್ಮಿಸಿ ಕೇಂದ್ರಕ್ಕೆ ಕೊಡಲಾಗಿದೆ ಎಂದು ಆರೋಪಿಸಿದರು.

ಶಾಸಕ ಆನಂದ್ ಸಿದ್ದು ನ್ಯಾಮಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ, ಕಳೆದ ಮೇ ತಿಂಗಳಿನಲ್ಲಿ ಅಕಾಲಿಕ ಮಳೆ, ಆಲಿಕಲ್ಲು, ಜುಲೈನಿಂದ ಅಕ್ಟೋಬರ್ ವರೆಗೆ ಬಿದ್ದ ಮಳೆಯಿಂದಾಗಿ 5264.20 ಹೆಕ್ಟೇರ್ ದ್ರಾಕ್ಷಿ ಬೆಳೆ ಹಾನಿಯಾಗಿದ್ದು, ಮಾರ್ಗ ಸೂಚಿ ಪ್ರಕಾರ ಪ್ರತಿಹೆಕ್ಟರ್‍ಗೆ 18ಸಾವಿರ ರೂ. ಗರಿಷ್ಠ ಎರಡು ಎಕರೆ ವರೆಗೆ ಪರಿಹಾರ ಧನ ವಿತರಿಸಲು ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಪರಿಹಾರ ವಿತರಣೆಗೆ ಕಂದಾಯ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

Facebook Comments