ವಿದ್ಯಾರ್ಥಿ ನಿಲಯಗಳಿಗೆ ನಿವೇಶನ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಕಾಗೇರಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.1- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ ನಿವೇಶನ ಗುರುತಿಸಲು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಸೂಚನೆ ನೀಡಬೇಕೆಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೂಚನೆ ನೀಡಿದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು. ಜೆಡಿಎಸ್ ಸದಸ್ಯ ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ, ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಕಾಗೇರಿ ಅವರು, ನೀವು ಅಧಿಕಾರಿಗಳಿಗೆ ನಿವೇಶನ ಗುರುತಿಸಲು ಸೂಚನೆ ಕೊಟ್ಟರೆ, ಅವರು ನಿವೇಶನ ಇಲ್ಲ ಎಂಬ ಆರಿಕೆ ಉತ್ತರ ನೀಡುತ್ತಾರೆ. ಈ ಪರಿಸ್ಥಿತಿ ಹೀಗೆ ಮುಂದುವರೆಯಬಾರದು. ಸ್ವತಃ ನೀವೇ ಡಿಸಿ ಮತ್ತು ಎಸಿಗಳಿಗೆ ಸ್ಥಳ ಗುರುತಿಸಲು ಸೂಚನೆ ನೀಡಬೇಕೆಂದು ನಿರ್ದೇಶಿಸಿದರು.

ಖಾಸಗಿ ಕಟ್ಟಡದಲ್ಲಿ ವಿದ್ಯಾರ್ಥಿನಿಲಯಗಳು ನಿರ್ವಹಣೆ ಮಾಡುವುದರ ಹಿಂದೆ ದೊಡ್ಡ ಲಾಬಿಯೇ ಇದೆ. ನೀವು ಪ್ರತಿ ಸಂದರ್ಭದಲ್ಲೂ ಇಂತಹ ಉತ್ತರ ಕೊಡುವುದು ಸರಿಯಲ್ಲ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದುವರೆಯಬಾರದು ಎಂದರು. ಇದಕ್ಕೆ ಉತ್ತರಿಸಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ರಾಜ್ಯದಲ್ಲಿ ಒಟ್ಟು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 1031 ವಿದ್ಯಾರ್ಥಿ ನಿಲಯಗಳಿದ್ದು, ಇದರಲ್ಲಿ 695 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿವೆ. ಸ್ವಂತ ಕಟ್ಟಡ ಕಟ್ಟಲು ಹಣಕಾಸಿನ ಸಮಸ್ಯೆಯಿದೆ ಎಂದು ಹೇಳಿದರು.

ಇದಕ್ಕೆ ಆಕ್ಷೇಪಿಸಿದ ಜೆಡಿಎಸ್‍ನ ಶಿವಲಿಂಗೇಗೌಡ ಅವರು, ಎಸ್ಸಿಎಸ್ಟಿ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯಡಿ ನಿರ್ವಹಿಸುವ ವಿದ್ಯಾಥಿ ನಿಲಯಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ನಿರ್ವಹಣೆ ಮಾಡುವ ಹಾಸ್ಟೆಲ್‍ಗಳಿಗೆ ಯಾವುದೇ ರೀತಿಯ ಸೌಲಭ್ಯವಿಲ್ಲ. ಅದರಲ್ಲೂ ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೆಲ್‍ಗಳ ಪರಿಸ್ಥಿತಿಯಂತೂ ಹೇಳತೀರದು.

ಶೌಚಾಲಯ, ಮಲಗುವ ಕೊಠಡಿ, ಕಾಂಪೌಂಡ್, ಮೂಲಭೂತ ಸೌಕರ್ಯ ಯಾವುದೂ ಇರುವುದಿಲ್ಲ. ನಿಮಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಇಲಾಖೆಗೆ ಬಜೆಟ್‍ನಲ್ಲಿ ನಿಗದಿಯಾಗಿದ್ದ ಅನುದಾನ ಕೊರತೆಯಾಗಿದೆ. ಹೀಗಾಗಿ ಸಣ್ಣಪುಟ್ಟ ಸಮಸ್ಯೆಗಳಾಗುವುದು ಎಂದು ಮನವರಿಕೆ ಮಾಡಿದರು.
ಇದಕ್ಕೂ ಮುನ್ನ ಸದಸ್ಯರಾದ ಅಮರೇಗೌಡ ಮತ್ತಿತರ ಸದಸ್ಯರು ಹಾಸ್ಟೆಲ್‍ಗಳ ದುಃಸ್ಥಿತಿಯನ್ನು ಸಚಿವರಿಗೆ ತೆರೆದಿಟ್ಟರು.
ಅಮರೇಗೌಡ ಬಯ್ಯಾಪುರ ಮತ್ತಿತರ ಸದಸ್ಯರು ಹಾಸ್ಟೆಲ್‍ಗಳ ದುಸ್ಥಿತಿಯನ್ನು ತೆರೆದಿಟ್ಟರು.

Facebook Comments