ಅನಧಿಕೃತ ಮದ್ಯ ಮಾರಾಟ ತಡೆಯುವಂತೆ ಸರ್ಕಾರಕ್ಕೆ ಸ್ಪೀಕರ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.10- ರಾಜ್ಯದಲ್ಲಿ ಅನಧಿಕೃತ ಮದ್ಯ ಮಾರಾಟ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿಂದು ಸೂಚಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ಬೇವೂರ ಅವರ ಪ್ರಶ್ನೆ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್, ರಾಜ್ಯದಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿರುವುದು ಹಾಗೂ ಸರ್ಕಾರ ಮಾರಾಟಗಾರರಿಗೆ ಗುರಿ ನಿಗದಿ ಪಡಿಸಿರುವ ಬಗ್ಗೆ ಶಾಸಕರು ಪ್ರಸ್ತಾಪಿಸುತ್ತಿದ್ದು, ಸರ್ಕಾರ ಅನಧಿಕೃತ ಮದ್ಯ ಮಾರಾಟ ತಡೆಯಲು ಕ್ರಮ ಜರುಗಿಸಬೇಕು ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮದ್ಯ ಮಾರಾಟಕ್ಕೆ ಸರ್ಕಾರ ನಿಗದಿಪಡಿಸಿರುವ ಗುರಿ ಮತ್ತು ಅನಧಿಕೃತ ಮದ್ಯ ಮಾರಾಟದ ಬಗ್ಗೆ ಶಾಸಕರು ಪ್ರಸ್ತಾಪಿಸಿದ್ದಾರೆ. ಕಲಬುರ್ಗಿಯಲ್ಲಿ ಕಾನೂನು ಬಾಹೀರವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ತಂದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ದತ್ತಾತ್ರೇಯ ಪಾಟೀಲ ಬೇವೂರ, ಕಲಬುರ್ಗಿಯಲ್ಲಿ ಕಾಲೇಜಿನ ಎದುರಿಗೆ ಬಾರ್ ನಡೆಸಲಾಗುತ್ತಿದೆ. ಈ ಬಗ್ಗೆ ದಾಖಲೆ ಒದಗಿಸುತ್ತೇನೆ, ಕಿರಾಣಿ ಅಂಗಡಿಯಲ್ಲೂ ಮದ್ಯ ಮಾರಾಟವಾಗುತ್ತಿದೆ ಎಂದರು.

ಇದಕ್ಕೆ ದನಿಗೂಡಿಸಿದ ಶಾಸಕರಾದ ಪ್ರಿಯಾಂಕ್ ಖರ್ಗೆ, ಎಚ್.ಕೆ.ಕುಮಾರಸ್ವಾಮಿ, ಶಿವಲಿಂಗೇಗೌಡ ಮತ್ತಿತರರು, ಅನಧಿಕೃತ ಮದ್ಯ ಮಾರಾಟ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ಅನಧಿಕೃತ ಬಾರ್-ರೆಸ್ಟೋರೆಂಟ್ ನಡೆಯುತ್ತಿರುವ ಬಗ್ಗೆ ದಾಖಲೆಗಳು ಶಾಸಕರ ಬಳಿ ಇದ್ದರೆ ಸಚಿವರಿಗೆ ನೀಡಲಿ. ಸಚಿವರು ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಇಡೀ ರಾಜ್ಯದಲ್ಲಿ ಅನಧಿಕೃತ ಮದ್ಯ ಮಾರಾಟದ ಬಗ್ಗೆ ಆರೋಪಗಳಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

Facebook Comments