ಕಲಬುರಗಿ ವಿಮಾನ ನಿಲ್ದಾಣದ ನಿರ್ವಹಣೆ ಮಾಡಲಿದೆ ಭಾರತೀಯ ವಿಮಾನಯಾನ ಪ್ರಾಧಿಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24-ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸುವ ಒಡಂಬಡಿಕೆಗೆ ಸಹಿ ಹಾಕಲಾಯಿತು. ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಮಂತ್ರಾಲಯದ ಪರವಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರದ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಭಾರತೀಯ ವಿಮಾನಯಾನ ಪ್ರಾಧಿಕಾರದಿಂದ ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲಿದ್ದು, ಈ ನಿಲ್ದಾಣದಿಂದ ರಾಜ್ಯ ಹಾಗೂ ದೇಶದ ಇತರೆ ನಗರಗಳ ನಡುವೆ ವಿಮಾನಯಾನ ಸಂಪರ್ಕ ನಡೆಯಲಿದೆ. ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

ಈ ವಿಮಾನ ನಿಲ್ದಾಣವನ್ನು ಪ್ರಾದೇಶಿಕ ಸಂಪರ್ಕ ಯೋಜನೆ 3.0ಅಡಿಯಲ್ಲಿ ಪ್ರಾದೇಶಿಕ ವಿಮಾನಯಾನ ಕಾರ್ಯಾಚರಣೆಗೆ ಆಯ್ಕೆಯಾಗಿದೆ.
ಅಲೈಯನ್ಸ್ ಏರ್, ಗೋಧಾವತ್ ಏರ್ ಸಂಸ್ಥೆಗಳು ವಿಮಾನಯಾನ ಕಾರ್ಯಾಚರಣೆ ನಡೆಸಲು ಆಯ್ಕೆಯಾಗಿದ್ದು, ಬೆಂಗಳೂರು-ಕಲಬುರಗಿ, ಕಲಬುರಗಿ-ತಿರುಪತಿ, ಕಲಬುರಗಿ-ಹಿಂಡನ್ ನಡುವಿನ ಮಾರ್ಗಗಳು ಆಯ್ಕೆಯಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣ ಯೋಜನೆಗೆ 742ಎಕರೆ ಜಮೀನನ್ನು ಸುಮಾರು 22ಕೋಟಿ ರೂ. ವೆಚ್ಚದಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. 203ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಕಳೆದ 2018ರ ಆಗಸ್ಟ್ ತಿಂಗಳಿನಲ್ಲೆ ಪ್ರಾಯೋಗಿಕ ವಿಮಾನ ಹಾರಾಟವನ್ನು ಕೈಗೊಳ್ಳಲಾಗಿತ್ತು.

ಕಲಬುರಗಿ ವಿಮಾನ ನಿಲ್ದಾಣ ಒಡಂಬಡಿಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಸಂಸದ ಉಮೇಶ್ ಜಾಧವ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಕೆಎಸ್‍ಐಐಸಿ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಕಾರ್ಯಕಾರಿ ನಿರ್ದೇಶಕ ಎನ್.ಆರ್.ಎನ್.ಸಿಂಹ, ಭಾರತೀಯ ವಿಮಾನಯಾನ ಪ್ರಾಧಿಕಾರದ ಆರ್ಕಿಟೆಕ್ಟ್ ಡೈರೆಕ್ಟರ್ ಎ.ಜಿ.ಜೋಷಿ ಮತ್ತಿತರರು ಉಪಸ್ಥಿತರಿದ್ದರು.

Facebook Comments