ಕಳಸಾ-ಬಂಡೂರಿ ಕೇಂದ್ರದ ಸಮಿತಿ ವಿರುದ್ಧ ಮತ್ತೆ ಗೋವಾ ಕ್ಯಾತೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಪಣಜಿ, ನ 4(ಪಿಟಿಐ)-ಕರ್ನಾಟಕ ಮತ್ತು ಗೋವಾ ನಡುವೆ ತಲೆದೋರಿರುವ ಕಳಸಾ ಬಂಡೂರಿ ಯೋಜನೆ ವಿವಾದ ಮತ್ತಷ್ಟು ಜಟಿಲಗೊಂಡಿದೆ. ಮಹದಾಯಿ ನದಿಯಲ್ಲಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಈ ಯೋಜನೆಗೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಪರಿಸರ ಸಮ್ಮತಿ (ಇಸಿ) ನೀಡಿತ್ತು. ಇದನ್ನು ವಿರೋಧಿಸಿ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ)ಗೆ ದೂರು ನೀಡಿದೆ.

ಕೇಂದ್ರ ಸರ್ಕಾರ ಗೋವಾದ ಅಭಿಪ್ರಾಯವನ್ನು ಪಡೆಯದೆ ಏಕ ಪಕ್ಷೀಯವಾಗಿ ಪರಿಸರ ಸಮ್ಮತಿ ನೀಡುವ ಮೂಲಕ ಕರ್ನಾಟಕದ ಪರ ಮಲತಾಯಿ ಧೋರಣೆ ಅನುಸರಿಸಿದೆ. ಇದನ್ನು ನಾವು ತೀವ್ರ ವಿರೋಧಿಸುತ್ತೇವೆ. ಇಸಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ನ್ಯಾಯಾಧೀಕರಣಕ್ಕೆ ಪಕ್ಷವು ಸಲ್ಲಿಸಿರುವ ದೂರಿನಲ್ಲಿ ತಿಳಿಸಿದೆ.

ಕಳೆದ ವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೂ ಸಹ ಕೇಂದ್ರ ಸರ್ಕಾರದ ಪರಿಸರ ಸಮ್ಮತಿ ನೀತಿಗೆ ವಿರೋಧ ವ್ಯಕ್ತಪಡಿಸಿ ರಾಜ್ಯಸರ್ಕಾರದ ಅಭಿಪ್ರಾಯವನ್ನು ಆಲಿಸಬೇಕು. ಇಲ್ಲದಿದ್ದರೆ ನಾವು ಎನ್‌ಜಿಟಿ ಸೇರಿದಂತೆ ಸೂಕ್ತ ವೇದಿಕೆಗೆ ದೂರು ನೀಡುವುದಾಗಿ ತಿಳಿಸಿದರು. ಮಹದಾಯಿ ನದಿ ನಮಗೆ ತಾಯಿ ಸಮಾನ. ಅದನ್ನು ರಕ್ಷಿಸಲು ಯಾವುದೇ ಹೋರಾಟಕ್ಕೂ ನಾವು ಸಿದ್ಧ ಎಂದು ಸಾವಂತ್ ಟ್ವೀಟರ್‌ನಲ್ಲಿ ತಿಳಿಸಿದ್ದರು.

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಇತ್ತೀಚೆಗೆ ಕಳಸಾ ಬಂಡೂರಿ ಯೋಜನೆಗೆ ಎನ್ವಿರಾನ್‌ಮೆಂಟ್ ಕ್ಲಿಯರೆನ್ಸ್(ಪರಿಸರ ಸಮ್ಮತಿ-ಇಸಿ) ನೀಡುವುದಾಗಿ ಘೋಷಿಸಿದ್ದರು. ಇದರಿಂದ ಕಳಸಾ ಬಂಡೂರಿ ಯೋಜನೆಗೆ ಹಸಿರು ನಿಶಾನೆ ಲಭಿಸಿತ್ತಾದರೂ ಗೋವಾ ಈಗ ತೆಗೆದಿರುವ ಹೊಸ ತಗಾದೆಯಿಂದ ವಿವಾದ ಮತ್ತಷ್ಟು ಕಗ್ಗಂಟಾಗಿದೆ.

Facebook Comments