ಕಳಸದಲ್ಲಿ ಸಂಸ್ಕೃತ ಲೋಹ ಶಾಸನ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು ಸೆ.15-ಕಳಸ ಚಂದ್ರನಾಥ ಬಸದಿಯಲ್ಲಿ ಸಾಂತರದೊರೆಗಳ ಕಾಲದ 14ನೆಯ ಶತಮಾನದ ಸಂಸ್ಕøತ ಲೋಹಶಾಸನ ಪತ್ತೆ ಹಚ್ಚಲಾಗಿದೆ. ವಿಜಯನಗರ ಸಾಮ್ರಾಜ್ಯದ ಮಹಾಮಂಡಲೇಶ್ವರರಾದ ಕಳಸ-ಕಾರ್ಕಳರಾಜ್ಯದ ದೊರೆ ಭೈರವ ಅರಸರ ಬೇಸಿಗೆ ರಾಜಧಾನಿಯಾಗಿದ್ದ ಭದ್ರತೀರದ ಕಳಸ ಪಟ್ಟಣದ ಕೆಳಂಗಡಿ ಶ್ರೀಚಂದ್ರನಾಥ ಬಸದಿ ಇತಿಹಾಸ ಪ್ರಸಿದ್ಧ.

ಈ ಬಸದಿಯಲ್ಲಿ ನಿತ್ಯ ಪೂಜೆಗೊಳ್ಳುತ್ತಿದ್ದ ಶ್ರೀಮಹಾವೀರಸ್ವಾಮಿ ತೀರ್ಥಂಕರರ ಪಂಚಲೋಹದ ವಿಗ್ರಹದ ಹಿಂಭಾಗದಲ್ಲಿ ಬರೆಯಲ್ಪಟ್ಟ ಸಂಸ್ಕøತ ಭಾಷೆಯ ನಾಗರಿಲಿಪಿಯ ಅತ್ಯಮೂಲ್ಯ ಶಾಸನವನ್ನು ಕಳಸದ ಹವ್ಯಾಸಿ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಂಶೋಧಿಸಿದ್ದಾರೆ.

ವಿಕ್ರಂ ಸಂವತ್ಸರದ 1380ನೆಯ ವರ್ಷ ಮಾಘಮಾಸ ಕಾಲಮಾನ ಉಲ್ಲೇಖವಿರುವ ಈ ಲೋಹಶಾಸನ ಹೊಯ್ಸಳ ಚಕ್ರವರ್ತಿಗಳ ಮಾಂಡಲೇಶ್ವರ ಹೊಂಬುಜಮೂಲದ ಕಳಸಶಾಖೆ ಸಾಂತರದೊರೆಗಳ ಆಳ್ವಿಕೆ ಕಾಲದ್ದೆನ್ನಲಾಗಿದೆ.

ಕ್ರಿ.ಶ.1438ರಲ್ಲಿ ವೀರಪಾಂಡ್ಯ ದೇವರಸನಿಂದ ನಿರ್ಮಿಸಲ್ಪಟ್ಟ ಲೋಹಶಾಸನವನ್ನು ಅರ್ಚಕ ಅಜಿತ್‍ಪ್ರಸಾದ್ ಇಂದ್ರ ಸಹಕಾರದಿಂದ ಪತ್ತೆಹಚ್ಚಿರುವುದಾಗಿ ತಿಳಿಸಿರುವ ಪಾಂಡುರಂಗ, ಜೈನಧರ್ಮದ 24ನೆಯ ತೀರ್ಥಂಕರರಾದ ವರ್ಧಮಾನ ಮಹಾವೀರ-ಚತುರ್ವಿಂಶತಿ ತೀರ್ಥಂಕರರ ಸಹಿತ ಶಾಸನವಾಗಿದೆ. ಇದನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ಶ್ರೀಕ್ಷೇತ್ರ ಹೊಂಬುಜದಲ್ಲಿ ಅಕ್ಟೋಬರ್‍ನಲ್ಲಿ ನಡೆಯುವ ಕರ್ನಾಟಕ ಇತಿಹಾಸ ಅಕಾಡೆಮಿ ಸಮ್ಮೇಳನದಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ.

Facebook Comments