ಕಲಾಸಿಪಾಳ್ಯ – ಕೆ.ಆರ್.ಮಾರುಕಟ್ಟೆನಲ್ಲಿ ವ್ಯಾಪರ ಆರಂಭಕ್ಕೆ ರೈತರ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ನಗರದ ಕಲಾಸಿಪಾಳ್ಯ, ಕೆ.ಆರ್.ಮಾರು ಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವಂತೆ ಆಗ್ರಹಿಸಿ ನೂರಾರು ರೈತರು ಕೆ.ಆರ್.ಮಾರ್ಕೆಟ್ ವೃತ್ತದಿಂದ ಬಿಬಿಎಂಪಿ ಕಚೇರಿವರೆಗೂ ಪ್ರತಿಭಟನೆ ನಡೆಸಿದರು.

ಕೊರೊನಾ ಲಾಕ್‍ಡೌನ್ ತೆರವಾಗಿದ್ದರೂ ಕೆ.ಆರ್.ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದ ರೈತರಿಗೆ ತೀವ್ರ ನಷ್ಟವಾಗಿದೆ.

ರೈತರು ಬೆಳೆದ ಬೆಳೆಯನ್ನು ಅರ್ಧ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕೆ.ಆರ್.ಮಾರುಕಟ್ಟೆ ಆರಂಭ ಮಾಡಬೇಕು ಎಂದು ಆಗ್ರಹಿಸಿದರು.
ಸುಮಾರು 200ಕ್ಕೂ ಹೆಚ್ಚು ರೈತರು ಧರಣಿ ನಡೆಸಿ ಮಾರುಕಟ್ಟೆಯನ್ನು ತೆರೆಯಲು ಬಿಬಿಎಂಪಿ ಅವಕಾಶ ನೀಡಿ ರೈತರು ಬೆಳೆದ ಬೆಳೆ ಮಾರಾಟ ಮಾಡಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಕೋವಿಡ್ -19 ಹಿನ್ನೆಲೆಯಲ್ಲಿ ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಬೆಂಗಳೂರು ನಗರದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಬಿಬಿಎಂಪಿ ಅನಿವಾರ್ಯವಾಗಿ ಈ ಕ್ರಮ ತೆಗೆದುಕೊಂಡಿತ್ತು.

ಈ ಮಾರುಕಟ್ಟೆಗೆ ಪ್ರತಿದಿನ ಸಾವಿರಾರು ರೈತರು ತಾವು ಬೆಳೆದ ಹಣ್ಣು, ತರಕಾರಿ, ಹೂವು, ಸೊಪ್ಪು ಎಲ್ಲವನ್ನೂ ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದರು.

ಭಾರೀ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿತ್ತು. ಮಾರುಕಟ್ಟೆ ಬಂದ್ ಆದ ಹಿನ್ನೆಲೆಯಲ್ಲಿ ರೈತ ಸಮುದಾಯ ಮತ್ತು ವರ್ತಕರಿಗೆ ತೀವ್ರ ನಷ್ಟ ಉಂಟಾಗಿತ್ತು. ಅಲ್ಲದೆ ಗ್ರಾಹಕರಿಗೂ ಕೂಡ ಅಗತ್ಯ ವಸ್ತು ಸಿಗುತ್ತಿರಲಿಲ್ಲ.

ಪ್ರಸ್ತುತ ಈಗ ಎಲ್ಲಾ ಕಡೆ ಲಾಕ್‍ಡೌನ್ ತೆರವಾಗಿದ್ದು, ಆದರೆ, ಕಲಾಸಿಪಾಳ್ಯ ಮತ್ತು ಕೆ.ಆರ್.ಮಾರುಕಟ್ಟೆಯನ್ನು ಬಿಬಿಎಂಪಿ ಇನ್ನೂ ಆರಂಭ ಮಾಡಿಲ್ಲ. ಇದನ್ನು ವಿರೋಸಿ ಇಂದು ನೂರಾರು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು.

Facebook Comments

Sri Raghav

Admin