ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಕ್ಕೆ ಸಿಎಂಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22- ನಗರದ ಕಲಾಸಿಪಾಳ್ಯದಲ್ಲಿರುವ ತರಕಾರಿ ಸಗಟು ಮಾರುಕಟ್ಟೆ ಬಹಳ ಕಿಷ್ಕಿಂಧೆಯಾಗಿದ್ದು, ವ್ಯಾಪಾರ ವಹಿವಾಟಿಗೆ ತೊಂದರೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಿಕೊಡುವಂತೆ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ.

ಸಂಘದ ಅಧ್ಯಕ್ಷ ಆರ್.ವಿ.ಗೋಪಿ ಹಾಗೂ ಎಫ್‍ಕೆಸಿಸಿಐ ಸದಸ್ಯರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಹಾಲಿ ಕಲಾಸಿಪಾಳ್ಯದಲ್ಲಿರುವ ಮಾರುಕಟ್ಟೆ ತುಂಬಾ ಚಿಕ್ಕದಾಗಿದ್ದು, ವ್ಯಾಪಾರ ವಹಿವಾಟಿಗೆ ತೀವ್ರ ತೊಂದರೆಯಾಗುತ್ತಿದೆ.

ಈಗಾಗಲೇ ಕೃಷಿ ಮಾರುಕಟ್ಟೆ ಇಲಾಖೆಯವರು ಗುರುತಿಸಿರುವ ಬ್ಯಾಟರಾಯನಪುರದಲ್ಲಿ 30 ಎಕರೆ ಹಾಗೂ ಹೊಸೂರು ರಸ್ತೆಯ ಸಿಂಗೇನ ಅಗ್ರಹಾರದಲ್ಲಿ ಹಣ್ಣಿನ ಮಂಡಿಗಳಿರುವ ಕಡೆ 40 ಎಕರೆ ಕೃಷಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಜಾಗವನ್ನು ಗುರುತಿಸಿದ್ದು,ಆದಷ್ಟು ಬೇಗ ಮಾರುಕಟ್ಟೆಯನ್ನು ಅಲ್ಲಿಗೆ ಸ್ಥಳಾಂತರಿಸಿದರೆ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಸಂಘ ಮನವಿಯಲ್ಲಿ ಉಲ್ಲೇಖಿಸಿದೆ.

ದಿನನಿತ್ಯ ಇಲ್ಲಿಗೆ ನೂರಾರುಲಾರಿಗಳು, ಟೆಂಪೋಗಳು, ಕೈ ಗಾಡಿಗಳು ಬರುತ್ತಿದ್ದು, ಇಡೀ ದೇಶಕ್ಕೆ ತರಕಾರಿ ಸಾಗಾಣೆಯಾಗುತ್ತಿದೆ. ಸುಮಾರು ಹಲವಾರು ಮಂದಿ ವ್ಯಾಪಾರಕ್ಕೆ ಬಂದು-ಹೋಗುತ್ತಾರೆ ಬರೀ ಎರಡೂವರೆ ಎಕರೆ ಜಾಗದಲ್ಲಿ ತರಕಾರಿ ಹಾಗೂ ಹಣ್ಣು ಮಾರಾಟ ತುಂಬಾ ಕಷ್ಟಕರವಾಗಿದೆ.

ಬ್ಯಾಟರಾಯನಪುರದಲ್ಲಿ 30 ಎಕರೆ ಸ್ಥಳವನ್ನು ಕೃಷಿ ಮಾರುಕಟ್ಟೆ ಇಲಾಖೆಯವರು ಗುರುತಿಸಿದ್ದು, 2004ರಲ್ಲಿ ಅಂದಿನ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ವ್ಯವಸ್ಥೆಯಾಗಿಲ್ಲ. ಹಾಗಾಗಿ ಶೀಘ್ರ ಮಾರುಕಟ್ಟೆಯನ್ನು ಸ್ಥಳಾಂತರಿಸಿ ವ್ಯಾಪಾರಿಗಳಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕೋರಿದರು.

Facebook Comments