ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆಗೆ ಎಸ್‍ಐಟಿ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ,ಜೂ 9- ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದು ನಾಲ್ಕು ವರ್ಷಗಳಾದ ಬಳಿಕ ಹತ್ಯೆಯ ಪ್ರಕರಣದಲ್ಲಿ ಭಾಗಿಯಾದ ಅಮೋಲ್ ಕಾಳೆ, ಪ್ರವೀಣ ಚತುರ ಸೇರಿದಂತೆ ನಾಲ್ವರ ವಿರುದ್ಧ (ವಿಶೇಷ ತನಿಖಾ ತಂಡ) ಎಸ್‍ಐಟಿ ಶೀಘ್ರದಲ್ಲಿಯೇ ಜಾರ್ಚ್‍ಶೀಟ್ ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

2015 ಆಗಸ್ಟ್ 30 ರಂದು ಕಲಬುರ್ಗಿ ಅವರನ್ನು ಬೆಳಗಿನ ಜಾವ ಹಣೆಗೆ ಗುಂಡಿಟ್ಟು ಹಂತಕರು ಹತ್ಯೆಗೈದು ಪರಾರಿಯಾಗಿದ್ದರು. ಈ ಕುರಿತಂತೆ ಆಗಿನ ಸರ್ಕಾರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿತ್ತು.

ಈ ಎಸ್‍ಐಟಿ ತಂಡ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಪ್ರಕರಣದ ಮಾಸ್ಟರ್‍ಮೈಂಡ್ ಎನ್ನಲಾದ ಅಮೋಲ್ ಕಾಳೆ ಹಾಗೂ ಘಟನೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಸಲಾಗಿರುವ ಪ್ರವೀಣ್ ಚತುರನನ್ನು ಸಾಕಷ್ಟು ವಿಚಾರಣೆಗೊಳಿಸಿದ ನಂತರವೇ ಜಾರ್ಜ್‍ಶೀಟ್ ಸಲ್ಲಿಕೆಗೆ ಮುಂದಾಗಿದೆ ಎನ್ನಲಾಗುತ್ತಿದೆ.

ಆರೋಪಿಗಳನ್ನು ಬೆಂಗಳೂರಿನಲ್ಲಿ ವಿವಿಧ ಆಯಾಮಗಳಲ್ಲಿ ವಿಚಾರಣೆಗೊಳಪಡಿಸಿದಾಗ ಆರೋಪಿತರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾದವರು ಎನ್ನುವುದನ್ನು ಖಚಿತ ಪಡಿಸಿದಲ್ಲದೇ ಇಬ್ಬರ ಹತ್ಯೆಗೆ ಒಂದೇ ರೈಫಲ್ ಬಳಸಿರಬಹುದೆಂಬ ಸಂಶಯವನ್ನು ಎಸ್‍ಐಟಿ ವ್ಯಕ್ತಪಡಿಸಿತ್ತು.

ಸಾಕಷ್ಟು ವಿಚಾರಣೆ ನಡೆಸಿದ ನಂತರ ಆರೋಪಿತರನ್ನು ಸ್ಥಳ ಮಹಜರಿಗಾಗಿ ಧಾರವಾಡಕ್ಕೆ ಕರೆತಂದಿದ್ದು ಕಲಬುರ್ಗಿ ಅವರ ನಿವಾಸದ ಸುತ್ತಲಿನಲ್ಲಿ ವಿಚಾರಣೆ ಮಾಡಲಾಗಿದ್ದು ಆರೋಪಿತರು ಹತ್ಯೆಗೈದುದ್ದನ್ನು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಮಹಾರಾಷ್ಟ್ರದ ಅಮೋಲ್ ಕಾಳೆಯನ್ನು ಮೇ 21 ರಂದು ಬಂಧಿಸಲಾಗಿದ್ದು ಆತನನ್ನು ನಗರದ 3 ನೇ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಎಸ್‍ಐಟಿಯವರು ಜೂ.7 ರವರೆಗೆ ತಮ್ಮ ಕಸ್ಟಡಿಗೆ ಪಡೆದಿದ್ದರು. ಈತನ ವಿಚಾರಣೆ ನಂತರ ಸಂಗ್ರಹಿಸಿದ ಮಾಹಿತಿಯನ್ನು ಬೆಳಗಾವಿಯ ಪ್ರವೀಣ್ ಚತುರ ಎಂಬಾತನನ್ನು ಮೇ 31 ರಂದು ಬಂಧಿಸಿತ್ತು.

ಅಷ್ಟೇ ಅಲ್ಲದೇ ಹತ್ಯೆ ಮಾಡಿ ಬೈಕ್ ಮೇಲೆ ಪರಾರಿಯಾಗಿದ್ದ ಆರೋಪಿಗಳ ಬಗ್ಗೆಯಾಗಲಿ, ಬೈಕ್ ಬಗ್ಗೆಯಾಗಲೀ ಯಾವುದೇ ಮಾಹಿತಿಯೇ ಸಿಕ್ಕಿರಲಿಲ್ಲ. ಆದರೆ ಇತ್ತೀಚೆಗೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ ಹುಬ್ಬಳ್ಳಿಯ ಗಣೇಶ ಮಿಸ್ಕಿನ ಅನ್ನೋ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಮಾಡೋ ದಿನ ಆರೋಪಿಗಳು ಬಳಸಿದ್ದ ಬೈಕ್ ಕಪ್ಪು-ನೀಲಿ ಮಿಶ್ರಿತ ಡಿಸ್ಕವರಿ ಬೈಕ್ 125 ಸಿಸಿ ಬೈಕ್ ಎಂಬುದನ್ನು ಪತ್ತೆ ಹಚ್ಚಲಾಗಿತ್ತು.

ಇನ್ನೂ ಮಂಗಳೂರಿಗೆ ತೆರಳಿರುವ ತಂಡ ಅಲ್ಲಿ ಯಾರೊಂದಿಗೆ ಒಡನಾಟ ಬೆಳೆಸಿದ್ದರು ಎನ್ನುವುದನ್ನು ಸೂಕ್ಷ್ಮವಾಗಿ ಶೋಧನಾ ಕಾರ್ಯನಡೆಸಿದ್ದು ಒಟ್ಟಿನಲ್ಲಿ ಕಳೆದ 4 ವರ್ಷಗಳ ನಂತರವಾದರು ಆರೋಪಿಗಳನ್ನು ಪತ್ತೆಹಚ್ಚಿ ಹತ್ಯೆಗೈದವರನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲು ಎಲ್ಲ ರೀತಿಯಿಂದ ತಯಾರಿ ನಡೆಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ