ವರಿಷ್ಠರನ್ನು ಭೇಟಿ ಮಾಡಿದ ಕಲಬುರಗಿಯ ಜೆಡಿಎಸ್‍ನ ಪಾಲಿಕೆ ಸದಸ್ಯರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.8- ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್‍ನ ನಾಲ್ವರು ಚುನಾಯಿತ ಪಾಲಿಕೆ ಸದಸ್ಯರು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ನಡೆಸುತ್ತಿವೆ. ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಬೆಂಬಲವನ್ನು ಬಯಸುತ್ತಿವೆ.

ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ವರಿಷ್ಠರೊಂದಿಗೆ ಚುನಾಯಿತರಾಗಿರುವ ನಾಲ್ವರು ಪಾಲಿಕೆ ಸದಸ್ಯರು ಇಂದು ಸಮಾಲೋಚನೆ ನಡೆಸಿದರು.

ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ಯಾವ ರೀತಿ ಅಧಿಕಾರದಲ್ಲಿ ಭಾಗಿಯಾಗಬೇಕು, ಪಕ್ಷ ಸಂಘಟನೆಗೆ ಯಾವ ರೀತಿ ನೆರವಾಗಲಿದೆ ಎಂಬೆಲ್ಲ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡರೆ ಉಪಮೇಯರ್ ಸ್ಥಾನ, ಸ್ಥಾಯಿ ಸಮಿತಿಗಳ ಸ್ಥಾನಕ್ಕೆ ಬೇಡಿಕೆ ಇಡುವ ಬಗ್ಗೆಯೂ ವರಿಷ್ಠರ ನಡುವೆ ಚರ್ಚೆ ನಡೆಸಲಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಈಗಾಗಲೇ ಜೆಡಿಎಸ್ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಮೇಯರ್, ಉಪಮೇಯರ್ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿಲ್ಲದಿರುವುದರಿಂದ ಆತುರದ ನಿರ್ಧಾರ ಕೈಗೊಳ್ಳುವ ಅಗತ್ಯವಿಲ್ಲ ಎಂಬುದು ಜೆಡಿಎಸ್ ಮೂಲಗಳ ಮಾಹಿತಿ.

ಕಲಬುರಗಿಯಿಂದ ಬೆಂಗಳೂರಿಗೆ ಆಗಮಿಸಿರುವ ಜೆಡಿಎಸ್‍ನ ಪಾಲಿಕೆ ಸದಸ್ಯರಾದ ವಿಜಯಲಕ್ಷ್ಮಿ ರೆಡ್ಡಿ, ಸಾಜಿದ್ ಕಲ್ಯಾಣಿ, ವಿಶಾಲ ನವರಂಗ್, ಅಲಿಮೊದ್ದೀನ್ ಪಟೇಲ್ ಅವರು ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

Facebook Comments