ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಸೆ.17- ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಸೇರಿದಂತೆ ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಇಂದು 73ನೇಯ ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆ ನಗರದ ಎಸ್‍ವಿಪಿ ವೃತ್ತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಪೂಜೆ ಸಲ್ಲಿಸಿ ನಂತರ ಡಿಎಆರ್ ಮೈದಾನದಲ್ಲಿ ಧ್ವಜರೋಹಣ ನೇರವೇರಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೈದರಾಬಾದ್ ಕರ್ನಾಟಕವನ್ನು ಇಲ್ಲಿನ ಜನತೆಯ ಒತ್ತಾಸೆಯಂತೆ ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದ್ದೇವೆ. ಈ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹಂತ ಹಂತವಾಗಿ ಅನುಷ್ಠಾನ ಮಾಡಲಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕ ಈ ಭಾಗದ 6 ಜಿಲ್ಲೆಗಳನ್ನು ಯಾವ ಯಾವ ಕ್ಷೇತ್ರದಲ್ಲಿ ಹಿಂದುಳಿದಿದೆಯೋ ಅದಕ್ಕೆ ವಿಶೇಷ ಒತ್ತು ನೀಡಲಾಗುವುದು. ಬಜೆಟ್‍ನಲ್ಲಿ ಈ ಭಾಗಕ್ಕೆ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದೇನೆ. ಕಾಲ ಮಿತಿಯೊಳಗೆ ಇವುಗಳನ್ನು ಅನುಷ್ಠಾನ ಮಾಡಲಾಗುವುದು ಎಂದರು.

ರಾಜ್ಯದ ಯಾವುದೇ ಭಾಗವು ಅಭಿವೃದ್ಧಿಯಲ್ಲಿ ಹಿಂದುಳಿದಿರಬಾರದು. ಸರ್ಕಾರ ಯಾವುದೇ ಪ್ರದೇಶವನ್ನು ತಾರತಮ್ಯ ಮಾಡದೆ ಸಮಗ್ರ ಕರ್ನಾಟಕ ಅಭಿವೃದ್ಧಿಯತ್ತ ಗಮನಹರಿಸಿದೆ. ಕೆಲವೇ ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಯದೇವ ಹೃದ್ರೋಗ ಸಂಸ್ಥೆಯಿಂದ ಇಲ್ಲಿ 7.15 ಎಕರೆ ಪ್ರದೇಶದಲ್ಲಿ ಸುಮಾರು 350 ಕೋಟಿ ರೂ. ವೆಚ್ಚದ 300 ಹಾಸಿಗೆ ಸಾಮಥ್ರ್ಯವುಳ್ಳ ಆಸ್ಪತ್ರೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹೃದ್ರೋಗ ಕಾಯಿಲೆಗಳಿಗೆ ದೂರದ ಬೆಂಗಳೂರಿಗೆ ಬರುವುದು ತಪ್ಪತ್ತದೆ ಎಂದು ಅಭಿಪ್ರಾಯಪಟ್ಟರು.

ಕಲಬುರಗಿಯಲ್ಲಿ ಈಗಾಗಲೇ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುತ್ತಿದ್ದು, ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ಜೊತೆಗೆ ನೀರಾವರಿ, ಕೃಷಿ, ಆರೋಗ್ಯ ಸೇರಿದಂತೆ ಮತ್ತಿತರ ಯೋಜನೆಗಳಿಗೂ ಚಾಲನೆ ಕೊಟ್ಟಿದ್ದೇವೆ ಎಂದು ಹೇಳಿದರು.  ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾದರಿಯಲ್ಲೇ ಬಸವ ಕಲ್ಯಾಣ ಪ್ರಾಧಿಕಾರದ ಮೂಲಕ ಅನುಭವ ಮಂಟಪ ಕೆಲಸಕ್ಕೆ ಶೀಘ್ರದಲ್ಲೇ ಚಾಲನೆ ಕೊಡಲಾಗುವುದು. ಇದರಿಂದಲೂ ಈ ಭಾಗಕ್ಕೆ ಇನ್ನು ಹೆಚ್ಚಿನ ಅನುಕೂಲ ಸಿಗಲಿದೆ ಎಂದು ತಿಳಿಸಿದರು.

ಮಳೆ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆಂದು ಅನ್ಕೊಂಡಿರಲಿಲ್ಲ. ಮಳೆಯ ನಡುವೆ ಕಲ್ಯಾಣ ಕರ್ನಾಟಕ ಉತ್ಸವ ಯಶಸ್ವಿಯಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಏನೇನು ಕಾರ್ಯಕ್ರಮ ರೂಪಿಸಬೇಕು ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಇದೇ ವೇಳೇ 2013-14 ರಿಂದ 219-20ರ ವರೆಗೆ ಕೆಕೆಆರ್ ಡಿಬಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತ ವಿಶೇಷ ಕೈಪಿಡಿಯನ್ನು ಸಿಎಂ ಬಿಡುಗಡೆ ಮಾಡಿ,ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.

ಬ್ರಿಟಿಷರಿಂದ ದೇಶಕ್ಕೆ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತಿದ್ದರೆ ಅಂದಿನ ಹೈದರಾಬಾದ್ ಕರ್ನಾಟಕ, ಈಗಿನ ಕಲ್ಯಾಣ ಕರ್ನಾಟಕಕ್ಕೆ ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ಸಿಕ್ಕಿತ್ತು. ಈ ಹಿನ್ನೆಲೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಗುತ್ತದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಗುತ್ತದೆ.

ಇನ್ನು ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ್ ಕಾರಜೋಳ, ಸಂಸದ ಉಮೇಶ್ ಜÁದವ್, ಸಚಿವ ಆರ್.ಅಶೋಕ್, ಶಾಸಕ ದತ್ತಾತ್ರೇಯ ಪಾಟೀಲ್ ರೆವೂರ್, ಬಾಬುರಾವ್ ಚಿಂಚನಸೂರ್ ಸೇರಿದಂತೆ ಹಲವರು ಕಲ್ಯಾಣ ಕರ್ನಾಟಕದ ಉತ್ಸವದಲ್ಲಿ ಭಾಗಿಯಾಗಿದ್ದರು.

Facebook Comments