ಕಲ್ಯಾಣ ಕರ್ನಾಟಕದ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ : ಈಶ್ವರ್ ಖಂಡ್ರೆ
ಬೆಳಗಾವಿ, ಡಿ.21-ಕಲ್ಯಾಣ ಕರ್ನಾಟಕದ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಮಲತಾಯಿ ಧೋರಣೆ ಅನುಸರಿಸುವ ಮೂಲಕ ಘನಘೋರ ಅನ್ಯಾಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವ ಉದ್ದೇಶವೇ ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕೆಂದು. ಆದರೆ ಈ ಬಗ್ಗೆ ಚರ್ಚೆಯಾಗಿಲ್ಲ. ಕಳೆದ ಅಧಿವೇಶನದಲ್ಲಿ 10 ದಿನದೊಳಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾಡುವುದಾಗಿ ಮುಖ್ಯಮಂತ್ರಿ ಮಾತು ಕೊಟ್ಟಿದ್ದರು.
ಮೂರು ತಿಂಗಳು ಕಳೆದರೂ ಮಂಡಳಿ ರಚನೆಯಾಗಿಲ್ಲ. ಸಭೆಯೂ ನಡೆದಿಲ್ಲ. ಬಜೆಟ್ನಲ್ಲಿ 1500 ಕೋಟಿ ರೂ. ಒದಗಿಸಿದ್ದು, 125 ಕೋಟಿ ಮಾತ್ರ ಖರ್ಚಾಗಿದೆ ಎಂದು ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಗಳಲ್ಲಿ ಶೇ.80ರಷ್ಟು ಹುದ್ದೆಗಳು ಖಾಲಿಯಾಗಿವೆ. ಭರ್ತಿಯಾಗುತ್ತಿಲ್ಲ. ಕಲ್ಯಾಣ ಕರ್ನಾಟಕವನ್ನು 2ನೇ ದರ್ಜೆಯ ನಾಯಕರಂತೆ ಪರಿಗಣಿಸಲಾಗುತ್ತಿದೆ.
ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡುತ್ತೇವೆ. ಅನವಶ್ಯಕ ಕಾಯ್ದೆ ತಂದು ಆಡಳಿತ ವೈಫಲ್ಯ ಮುಚ್ಚಿ ಹಾಕುವ ಪ್ರಯತ್ನ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.