ಉಪ ಚುನಾವಣೆಯಲ್ಲಿ ಎಂಎನ್‍ಎಂ ಪಕ್ಷ ಸ್ಪರ್ಧಿಸಲ್ಲ : ಕಮಲ್ ಹಾಸನ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಸೆ.22-ತಮಿಳುನಾಡಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅ.21 ರಂದು ನಡೆಯುವ ಉಪಚುನಾವಣೆಯನ್ನು ಆಡಳಿತಾರೂಢ ಎಐಎಡಿಎಂಕೆ ಮತ್ತು ಪ್ರತಿಪಕ್ಷ ಡಿಎಂಕೆ ನಡುವಣ ಭ್ರಷ್ಟ ರಾಜಕೀಯ ನಾಟಕ ಎಂದು ಹಿರಿಯ ನಟ ಮತ್ತು ಮಕ್ಕಳ ನೀಧಿ ಮಯ್ಯಂ (ಎಂಎನ್‍ಎಂ) ಪಕ್ಷದ ನಾಯಕ ಕಮಲಹಾಸನ್ ಟೀಕಿಸಿದ್ದಾರೆ. ಭ್ರಷ್ಟಾಚಾರ ಮತ್ತು ಅಧಿಕಾರ ಆಸೆಗಾಗಿ ಈ ಎರಡೂ ಪಕ್ಷಗಳು ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ತಮ್ಮ ಪಕ್ಷ ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 21 ರಂದು ತಮಿಳುನಾಡಿನ ನಂಗುನೇರಿ ಮತ್ತು ವಿಕ್ರಮಂಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯು ಈ ಎರಡೂ ಪಕ್ಷಗಳಿಗೆ ಭ್ರಷ್ಟಾಚಾರ ರಾಜಕೀಯ ನಾಟಕವಾಗಿದೆ. ಅಲ್ಲದೆ, ಅಧಿಕಾರಕ್ಕಾಗಿ ಹಪಹಪಿಸುತ್ತಾ ಕಿತ್ತಾಟದಲ್ಲಿ ತೊಡಗಿವೆ ಎಂದು ವಾಗ್ದಾಳಿ ನಡೆಸಿದರು.

ಉಪಚುನಾವಣೆಯಲ್ಲಿ ಎಂಎನ್‍ಎಂ ಸ್ಪರ್ಧಿಸುವುದಿಲ್ಲ. ಬದಲಿಗೆ ತಮ್ಮ ಪಕ್ಷವು ಜನಹಿತಾಸಕ್ತಿ ಕಾರ್ಯಕ್ರಮಗಳನ್ನು ಮುಂದುವರೆಸುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿವೆ. 2021ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ತಮ್ಮ ಹೆಗ್ಗುರಿಯಾಗಿದೆ ಎಂದು ಕಮಲ್ ತಿಳಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಎಂಎನ್‍ಎಂ ಸ್ಪರ್ಧಿಸಿತ್ತು. ಅನೇಕ ಕ್ಷೇತ್ರಗಳಲ್ಲಿ ಪ್ರಬಲ ಪಕ್ಷಗಳ ಪ್ರಾಬಲ್ಯದ ನಡುವೆಯೂ ಮೂರನೇ ಸ್ಥಾನ ಗಳಿಸಿದೆ. ಇದು ಹೊಸ ಪಕ್ಷವಾದ ನಮಗೆ ಇರುವ ಜನಬೆಂಬಲವನ್ನು ಸೂಚಿಸುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಗಾಗಿ ಈಗಿನಿಂದಲೇ ಸಜ್ಜಾಗುತ್ತಿದ್ದೇವೆ ಎಂದು ಜನಪ್ರಿಯ ಚಿತ್ರನಟ ಕಮಲಹಾಸನ್ ಸೂಚಿಸಿದ್ದಾರೆ.

Facebook Comments