ಆರ್ ಆರ್ ನಗರದಲ್ಲಿ ಶಾಂತಿಯುತ ಮತದಾನ : ಪೊಲೀಸ್ ಆಯುಕ್ತ ಕಮಲ್‍ಪಂಥ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.3- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ತಿಳಿಸಿದ್ದಾರೆ. ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ ನಂತರ ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಬೇಕೆಂದು ಮನವಿ ಮಾಡಿದರು.

ಸಣ್ಣಪುಟ್ಟ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತಿನಲ್ಲಿದ್ದಾರೆ. ಮತದಾರರು ಯಾವುದೇ ಅಂಜಿಕೆ ಇಲ್ಲದೆ ಮುಕ್ತವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿ ಎಂದರು. ಮತದಾನ ನಡೆಯುತ್ತಿರುವ ಆರ್‍ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭದ್ರತೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 2563 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮೂವರು ಡಿಸಿಪಿ, 8 ಎಸಿಪಿ, 30 ಇನ್‍ಸ್ಪೆಕ್ಟರ್‍ಗಳು, 94 ಪಿಎಸ್‍ಐ, 185 ಎಎಸ್‍ಐ, 1547 ಕಾನ್‍ಸ್ಟೆಬಲ್‍ಗಳು ಹಾಗೂ 699 ಹೋಂಗಾರ್ಡ್‍ಗಳನ್ನು ಬಂದೋಬಸ್ತ್‍ಗೆ ನಿಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.  ಪ್ರತಿ ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬರು ಹೆಡ್‍ಕಾನ್‍ಸ್ಟೆಬಲ್ ಹಾಗೂ ಕಾನ್‍ಸ್ಟೆಬಲ್, ಸಾಮಾನ್ಯ ಮತಗಟ್ಟೆಗಳಿಗೆ ಒಬ್ಬರು ಕಾನ್‍ಸ್ಟೆಬಲ್, ಒಬ್ಬರು ಹೋಂಗಾರ್ಡ್ ನಿಯೋಜಿಸಲಾಗಿದೆ.

40 ಫ್ಲೇಯಿಂಗ್ ಸ್ಕ್ವಾಡ್‍ಗಳು, 2 ಕಂಪನಿ ಸಿಐಎಸ್‍ಎಫ್, ಒಂದು ಕಂಪನಿ ಕೇರಳ ರಾಜ್ಯ ಸಶಸ್ತ್ರ ಮೀಸಲು ಪಡೆ, 19 ಕೆಎಸ್‍ಆರ್‍ಪಿ ಹಾಗೂ 20 ಸಿಎಆರ್ ತುಕಡಿಗಳು ಹಾಗೂ ಇದರ ಜೊತೆಗೆ 91 ಚಿತಾ ಹಾಗೂ 32 ಹೊಯ್ಸಳ ವಾಹನಗಳನ್ನು ಸಹ ನಿಯೋಜನೆ ಮಾಡಲಾಗಿದೆ.

Facebook Comments