ಮಾರ್ಷಲ್‍ಗಳಿಗೆ ಹಲ್ಲೆ ಮಾಡಿದರೆ ಸುಮ್ನೆ ಬಿಡಲ್ಲ : ಕಮಲ್‍ಪಂತ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.6- ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜೀವವನ್ನು ಪಣ ಕ್ಕಿಟ್ಟು ಜನರಿಗಾಗಿ ಕೆಲಸ ಮಾಡುತ್ತಿರುವ ಮಾರ್ಷ ಲ್‍ಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ ಮಾಡುವಂತಹ ಕೆಲಸಕ್ಕೆ ಕೈ ಹಾಕಿದರೆ ಪೊಲೀಸರು ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಎಚ್ಚರಿಕೆ ನೀಡಿದರು.

ನಗರದ ಟೌನ್‍ಹಾಲ್‍ನಲ್ಲಿಂದು ಬಿಬಿಎಂಪಿ ಮತ್ತು ನಗರ ಪೊಲೀಸ್ ಆಯುಕ್ತಾಲಯಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಈಗಾಗಲೇ ವೈಟ್‍ಫೀಲ್ಡ್ ಮತ್ತಿತರ ಕಡೆ ಮಾರ್ಷಲ್‍ಗಳ ಮೇಲೆ ಹಲ್ಲೆ ಮಾಡಿದ್ದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗಿದೆ. ಸಮವಸ್ತ್ರದ ಬಣ್ಣ ಯಾವುದೇ ಇರಲಿ. ನೀವು ಮಾಡುತ್ತಿರುವುದು ಜನರ ಸೇವೆ. ಖಾಕಿಗೆ ಇರುವಷ್ಟೇ ಸುಭದ್ರತೆಯನ್ನು ಮಾರ್ಷಲ್‍ಗಳಿಗೂ ನೀಡುವುದಾಗಿ ಆಯುಕ್ತರು ಭರವಸೆ ನೀಡಿದರು.

ಕೊರೊನಾ ನಿಯಂತ್ರಣಕ್ಕೆ ಪೊಲೀಸರು ಮತ್ತು ಮಾರ್ಷಲ್‍ಗಳು ಜಂಟಿಯಾಗಿ ಕೆಲಸ ಮಾಡಬೇಕು. ಇತ್ತೀಚೆಗೆ ಮಾರ್ಷಲ್‍ಗಳ ಕೆಲಸದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿದೆ. ಕಾನೂನು ಉಲ್ಲಂಘನೆ ಮಾಡುವ ಮುನ್ನ ಮಾರ್ಷಲ್‍ಗಳು ಬರುತ್ತಾರೆ ಎಂಬ ಭಯ ಜನರಲ್ಲಿ ಹುಟ್ಟಿದೆ. ಪೊಲೀಸರು ಕೂಡ ಕೊರೊನಾ ನಿಯಂತ್ರಣದಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ ಎಂದರು.

120 ಮಂದಿ ಸಬ್‍ಇನ್ಸ್‍ಪೆಕ್ಟರ್‍ಗಳು ಮಾಸ್ಕ್ ಧರಿಸದೇ ಇರುವವರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮಾರ್ಷಲ್‍ಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಹೈಕೋರ್ಟ್ ಮತ್ತು ರಾಜ್ಯ ಮುಖ್ಯಕಾರ್ಯದರ್ಶಿಯವರು ಸ್ಪಷ್ಟ ಸೂಚನೆ ನೀಡಿದ್ದಾರೆ. ಜನರ ಸುರಕ್ಷತೆ ದೃಷ್ಟಿಯಿಂದ ಬಿಬಿಎಂಪಿ ಮತ್ತು ಪೊಲೀಸರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಬಿಬಿಎಂಪಿ ಮಾರ್ಷಲ್‍ಗಳ ಕೆಲಸಕ್ಕೆ ಯಾರೇ ಅಡ್ಡಿಪಡಿಸಿದರೆ, ಹಲ್ಲೆ ಮಾಡಿದರೆ, ಅನಗತ್ಯವಾಗಿ ತೊಂದರೆಕೊಟ್ಟರೆ ಅಂತಹವರನ್ನು ಪೊಲೀಸರು ಸುಮ್ಮನೆ ಬಿಡುವುದಿಲ್ಲ. ಜೈಲಿಗೆ ಕಳುಹಿಸಲೂ ಹಿಂದೆ-ಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಹೊಸದಾಗಿ ಯಾವುದೇ ಕಾನೂನುಗಳನ್ನು ಜಾರಿಗೆ ತರಬೇಕಾದರೂ ಸಣ್ಣ ಪುಟ್ಟ ಗೊಂದಲಗಳಿರುತ್ತವೆ. ಕಾನೂನು ರಚನೆ ಮಾಡುವಾಗ ಮುಂದೆ ಉದ್ಭವಿಸಬಹುದಾದ ಎಲ್ಲಾ ಸಮಸ್ಯೆಗಳಿಗೂ ಒಮ್ಮೆಲೆ ಪರಿಹಾರ ಯೋಚಿಸಲು ಸಾಧ್ಯವಿಲ್ಲ. ಸಂದರ್ಭನುಸಾರ ಎದುರಾಗುವ ಸವಾಲುಗಳು ಹಾಗೂ ಬೆಂಬಲಗಳಿಗೆ ಸ್ಪಷ್ಟನೆ ಪಡೆದುಕೊಳ್ಳಬೇಕು ಎಂದರು.

ಕಾನೂನಿನ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಅದು ಜಾರಿಯಾಗುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳನ್ನು ಸಿಬ್ಬಂದಿಗಳು ಸ್ವಂತ ವಿವೇಚನೆ ಮೂಲಕವೇ ಅನುಸರಿಸಬೇಕು ಎಂದು ಹೇಳಿದರು. ಕರ್ಚಿಪ್ ಕಟ್ಟಿದವರಿಗೆ ದಂಡ ಹಾಕುವುದು, ಕಾರಿನಲ್ಲಿ ಕುಳಿತವರಿಗೆ ದಂಡ ಹಾಕಬೇಕೋ ಬೇಡವೋ ಎಂಬೆಲ್ಲಾ ಸಮಸ್ಯೆಗಳು ಎದುರಾಗಿವೆ.

ಈ ಗೊಂದಲದ ಸಂದರ್ಭದಲ್ಲಿ ಸಾರ್ವಜನಿಕರು ಮಾತುಕತೆ ನಡೆಸುತ್ತಾರೆ. ಮಾತುಕತೆ ಸೌಹಾರ್ದಯುತವಾಗಿದ್ದರೆ ಅದಕ್ಕೆ ಸಮಾಧಾನವಾಗಿ ಉತ್ತರ ಹೇಳಬೇಕು. ಉದ್ದಟತನದ ವರ್ತನೆ ತೋರಿ ಉದ್ದೇಶ ಪೂರ್ವಕವಾಗಿ ಕಿರಿಕಿರಿ ಮಾಡಿದರೆ ಕಾನೂನಿನ ಮೂಲಕ ಉತ್ತರ ಹೇಳಬೇಕು ಎಂದು ತಿಳಿಸಿದರು.

ಇತ್ತೀಚೆಗೆ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂಬ ಕಾರಣಕ್ಕಾಗಿ ಹರವಾಗಿ ತೆಗೆದುಕೊಳ್ಳಬಾರದು. ಮುಂದಿನ 2-3 ತಿಂಗಳುಗಳ ಕಾಲ ಈಗಿರುವ ವೇಗದಲ್ಲೇ ಕೆಲಸ ಮಾಡಬೇಕು ಎಂದು ಕಮಲ್‍ಪಂತ್ ಸಲಹೆ ನೀಡಿದರು.

Facebook Comments