ಕ್ರಿಮಿನಲ್‍ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.28- ಇಂದಿನಿಂದ ಆರಂಭವಾಗಿರುವ ಮಾಸಿಕ ಜನಸಂಪರ್ಕ ಸಭೆಗೆ ಉತ್ತಮ ಜನ ಸ್ಪಂದನೆ ದೊರೆತಿದ್ದು, ಕ್ರಿಮಿನಲ್‍ಗಳಿಗೆ ಈ ಸಭೆಯ ಮೂಲಕ ಪೊಲೀಸರು ಸ್ಪಷ್ಟ ಎಚ್ಚರಿಕೆಯ ಸಂದೇಶ ರವಾನಿಸಲು ಸಾಧ್ಯವಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್‍ಪಂಥ್ ತಿಳಿಸಿದ್ದಾರೆ.

ಪೂರ್ವ ವಿಭಾಗದ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ನಡೆದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಉತ್ತಮ ಭಾಂದವ್ಯ ಇರಬೇಕು. ಜನರಿಗೆ ತಮ್ಮ ಕೆಲಸ ಯಾವ ಹಂತದಲ್ಲಿದೆ ಎಂಬ ಮಾಹಿತಿ ಸಿಗಬೇಕು ಎಂಬ ಕಾರಣಕ್ಕೆ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ.

ಜನಸಂಪರ್ಕ ಸಭೆಯ ದಿನ ಠಾಣೆಯ ರೈಟರ್‍ರಿಂದ ಹಿಡಿದು ಡಿಸಿಪಿವರೆಗೆ ಎಲ್ಲಾ ಹಂತದ ಅಧಿಕಾರಿಗಳು ಠಾಣೆಯಲ್ಲಿ ಲಭ್ಯ ಇರುತ್ತಾರೆ. ಈ ಸಭೆಯ ಮೂಲಕ ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಯಾವ ಅಭಿಪ್ರಾಯ ಇದೆ ಎಂದು ಗೋತ್ತಾಗಲಿದೆ ಮತ್ತು ಕೆಳ ಹಂತದ ಸಿಬ್ಬಂದಿಗಳು ಹಾಗೂ ಹಿರಿಯ ಅಧಿಕಾರಿಗಳ ನಡುವೆ ಸಮಾಲೋಚನೆಗೂ ಅವಕಾಶ ಸಿಗಲಿದೆ ಎಂದರು.

ನಗರದ ಎಲ್ಲ ಪೊಲೀಸ್ ಠಾಣೆಗಳು ಇಂದು ಮಾಸಿಕ ಜನಸಂಪರ್ಕ ಸಭೆ ನಡೆಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಯಲ್ಲದೆ ಸಂಚಾರ ಠಾಣೆ ಹಾಗೂ ಸಿಸಿಬಿ ಕಚೇರಿಯಲ್ಲೂ ಜನಸಂಪರ್ಕ ಸಭೆಗಳು ನಡೆದಿವೆ ಎಂದರು. ಪೊಲೀಸ್ ಆಯುಕ್ತರು ಪುಲಕೇಶಿನಗರ ಠಾಣೆಯ ಸಭೆಯ ಬಳಿಕ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಸಿಕ ಸಭೆಯಲ್ಲಿ ಭಾಗವಹಿಸಿದ್ದರು. ನಗರದ ಒಟ್ಟು 12 ಠಾಣೆಗಳಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪೂರ್ವ ವಿಭಾಗದ ಅಪರ ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರು ಪುಲಿಕೇಶನಗರ ಮತ್ತು ಬಾಣಸವಾಡಿ ಠಾಣೆಯಲ್ಲಿ, ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಅವರು ಹನುಮಂತನಗರ ಮತ್ತು ಬ್ಯಾಟರಾಯನಪುರ ಠಾಣೆಯಲ್ಲಿ ಹಾಗೂ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಎನ್.ಟಿ.ಪೇಟೆಯ ಸಿಸಿಬಿ ಕಚೇರಿಯಲ್ಲಿ ಮಾಸಿಕ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು.

ಕೇಂದ್ರ ವಿಭಾಗದ ಉಪಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ಅಶೋಕನಗರ ಠಾಣೆ, ಪೂರ್ವ ವಿಭಾಗ(ಪ್ರಭಾರ) ಉಪಪೊಲೀಸ್ ಆಯುಕ್ತರಾದ ಇಶಾಪಂತ್ ಅವರು ಪುಲಿಕೇಶಿನಗರ, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿದರು. ಪಶ್ಚಿಮ ವಿಭಾಗ ಉಪಪೊಲೀಸ್ ಆಯುಕ್ತ ಡಾ.ಸಂಜೀವ್ ಪಾಟೀಲ್ ಅವರು ವಿಜಯನಗರ ಪೊಲೀಸ್ ಠಾಣೆ, ಉತ್ತರ ವಿಭಾಗ ಉಪಪೊಲೀಸ್ ಆಯುಕ್ತ ಧರ್ಮೇಂದ್ರಕುಮಾರ್ ಅವರು ಆರ್‍ಟಿನಗರ ಪೊಲೀಸ್ ಠಾಣೆಯಲ್ಲಿ ಮಾಸಿಕ ಸಭೆ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು.

ದಕ್ಷಿಣ ವಿಭಾಗ ಉಪಪೊಲೀಸ್ ಆಯುಕ್ತ  ಹರೀಶ್ ಪಾಂಡೆ ಅವರು ಹನುಮಂತನಗರ ಪೊಲೀಸ್ ಠಾಣೆ, ಆಗ್ನೇಯ ವಿಭಾಗ ಉಪಪೊಲೀಸ್ ಆಯುಕ್ತ ಜೋಶಿ ಶ್ರೀನಾಥ್ ಮಹಾದೇವ್ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ ನಡೆಸಿದರು.  ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಅವರು ಯಲಹಂಕ ಪೊಲೀಸ್ ಠಾಣೆ ಮತ್ತು ವೈಟ್‍ಫೀಲ್ಡ್  ವಿಭಾಗದ ಉಪ ಪೊಲೀಸ್ ಆಯುಕ್ತ ಡಿ.ದೇವರಾಜ ಅವರು ಕೆ.ಆರ್‍ಪುರಂ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ದೂರು ಆಲಿಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.

Facebook Comments