ಒಂದೇ ಕಟ್ಟಡದಲ್ಲಿ ಎಲ್ಲಾ ಪೊಲೀಸ್ ಕಚೇರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.9- ನಗರದಲ್ಲಿ ಜಾಗದ ಕೊರತೆಯಿಂದಾಗಿ ಠಾಣೆಯಿಂದಿಡಿದು ಡಿಸಿಪಿ ಕಚೇರಿವರೆಗೂ ಎಲ್ಲವನ್ನೂ ಒಂದೇ ಕಟ್ಟಡದಲ್ಲಿರುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ತಿಳಿಸಿದರು. ರಾಜಾಜಿನಗರದ ಶ್ರೀ ಜಗದ್ಗುರು ಬಸವೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ಸಂಚಾರ ವಿಭಾಗದಿಂದ ಆಯೋಜಿಸಲಾಗಿದ್ದ ಸಂಚಾರ ಸಂಪರ್ಕ ದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪೊಲೀಸ್ ಠಾಣೆಗಳಿಗೆ ಜಾಗದ ಕೊರತೆ ಇದೆ.

ಹೈಗ್ರೌಂಡ್ ಪೊಲೀಸ್ ಠಾಣೆಗೆ ಜಾಗದ ಕೊರತೆ ಎದುರಾಗಿತ್ತು. ಈಗ ಅದನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಟ್ರಾಫಿಕ್ ಟರ್ಮಿನಲ್ ಕಟ್ಟಡವನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದೇವೆ. ಹಲಸೂರಿನಲ್ಲಿರುವ ಕಟ್ಟಡದಲ್ಲಿ ಕೆಳಗೆ ಪೊಲೀಸ್ ಠಾಣೆ ಇದೆ. ಮೇಲೆ ಡಿಸಿಪಿ ಕಚೇರಿ ಮಾಡಿದ್ದೇವೆ. ಇದೇ ರೀತಿ ಬೆಂಗಳೂರಿನಾದ್ಯಂತ ಸಂಚಾರ, ಕಾನೂನು ಸುವ್ಯವಸ್ಥೆ, ಅಪರಾಧ , ಡಿಸಿಪಿ, ಎಸಿಪಿ ಕಚೇರಿಗಳು ಸೇರಿದಂತೆ ಎಲ್ಲವನ್ನೂ ಒಂದೇ ಕಟ್ಟಡದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ರಾಜಾಜಿನಗರದ ನಿವಾಸಿ ಗೀತಾ ಮಿಶ್ರ ಅವರು ಮಾತನಾಡಿ, ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿ ಹೊಡೆಯಬೇಕು ಎಂಬ ನಿಯಮವಿತ್ತು. ಈ ಕುರಿತಂತೆ ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತಯಾರಿ ಮಾಡಿದ್ದೆವು. ಆದರೆ, ನಿನ್ನೆ ಬಂದ ಮಾಹಿತಿ ನಮಗೆ ತೃಪ್ತಿ ನೀಡಿದೆ. ರಾಜಾಜಿನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ದೀಪಾವಳಿ ಸಂದರ್ಭದಲ್ಲಿ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ 22 ಪ್ರಕರಣಗಳನ್ನು ದಾಖಲಿಸಿದ್ದಾರೆ. ರಾಜಾಜಿನಗರ ಠಾಣೆ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪೊಲೀಸ್ ಆ್ಯಕ್ಟ್ ಸೆಕ್ಷನ್ 93 ಪ್ರಕಾರ ಪ್ರಾಣಿಗಳ ಮೇಲಿನ ದೌರ್ಜನ್ಯ ಎಸಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವಿದೆ. ಬಹಳಷ್ಟು ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಆಯುಕ್ತರು ಈ ಬಗ್ಗೆ ಎಲ್ಲರಿಗೂ ತಿಳುವಳಿಕೆ ನೀಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ನಾಗರಾಜ್, ದೇವರಾಜ ಅರಸು ಟ್ರಕ್ ಟರ್ಮಿನಲ್‍ನಲ್ಲಿ ಲಾರಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅಲ್ಲಿ ಯಾರೆಂದರೆ ಅವರು ಬಂದು ಹೋಗುತ್ತಿದ್ದಾರೆ. ರಾತ್ರಿ ವೇಳೆ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಮಾರಕಾಸ್ತ್ರಗಳನ್ನು ತೋರಿಸಿ ಲಾರಿ ಚಾಲಕರನ್ನು ಬೆದರಿಸಿ ದರೋಡೆ ಮಾಡುತ್ತಿದ್ದಾರೆ ಎಂದಾಗ, ಉತ್ತರ ನೀಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯವರು, ಈ ಸಂಬಂಧಪಟ್ಟಂತೆ ಎರಡು ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಬಂಧಿಸಿದ್ದೇವೆ. ಟರ್ಮಿನಲ್‍ನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಗುತ್ತಿಗೆದಾರರಾದ ಶಿವಕುಮಾರ್ ಮಾತನಾಡಿ, ಸಂಚಾರಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಖುದ್ದು ಆಯುಕ್ತರೇ ಸಭೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರಲ್ಲದೆ, ಬಾರ್ , ರೆಸ್ಟೋರೆಂಟ್, ಆಸ್ಪತ್ರೆ ಮತ್ತು ಬ್ಯಾಂಕುಗಳ ಮುಂದೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ರಾಜಾಜಿನಗರ ಸಂಚಾರ ಠಾಣೆಯ ಇನ್ಸ್‍ಪೆಕ್ಟರ್ ಶ್ರೀಧರ್, ಈಗಾಗಲೇ ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೇವೆ. ಆದರೂ ಎಚ್ಚೆತ್ತುಕೊಳ್ಳದೆ ಇದ್ದರೆ ವಾಹನಗಳನ್ನು ಟೋಯಿಂಗ್ ಮಾಡುವುದಾಗಿ ತಿಳಿಸಿದರು. ಯಶವಂತಪುರದಲ್ಲಿರುವ ಅಪಾರ್ಟ್ ಮೆಂಟ್ ಬಳಿ ವಾಹನಗಳ ನಿಲುಗಡೆಯಿಂದ ಸಮಸ್ಯೆಯಾಗುತ್ತಿದೆ ಎಂದು ನಿವಾಸಿ ಸತೀಶ್ ಅವರು ದೂರಿದರು.

ನಂದಿನಿ ಲೇಔಟ್‍ನ ಕಾರ್ತಿಕ್ ಅವರು ಕಂಠೀರವ ಸ್ಟುಡಿಯೋ ಬಳಿ ಅಂಡರ್‍ಪಾಸ್ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಬಿಡಿಎ ಅಧಿಕಾರಿಗಳಿಗೆ ಹೇಳಿ ಕಾಮಗಾರಿಯನ್ನು ಶೀಘ್ರ ಮುಗಿಸಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಬೆಂಗಳೂರಿನಾದ್ಯಂತ ಐದು ಅಂಡರ್‍ಪಾಸ್ ಕಾಮಗಾರಿಗಳಲ್ಲಿ ಸಮಸ್ಯೆಯಾಗಿದೆ. ಸರ್ಕಾರದ ಜತೆ ಸಂಪರ್ಕದಲ್ಲಿದ್ದೇವೆ. ಶೀಘ್ರ ಕಾಮಗಾರಿ ಮುಗಿಸುವ ಪ್ರಯತ್ನ ನಡೆಸುತ್ತೇವೆ ಎಂದು ತಿಳಿಸಿದರು.

ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎಸ್.ದೊಡ್ಡಣ್ಣನವರ್ ಮಾತನಾಡಿ, ಶಾಲೆಯ ಗೇಟಿನ ಎದುರೇ ಬಸ್ ನಿಲ್ದಾಣ ಇದೆ. ಮಕ್ಕಳು ಹೊರಹೋಗಬೇಕಾದರೆ ಬಸ್‍ಗಳು ಅಡ್ಡ ನಿಂತಿರುತ್ತವೆ. ಬಸ್ ಹಿಂದಿನಿಂದ ಬರುವ ವಾಹನಗಳು ಕಾಣದೆ ಕೆಲವು ವೇಳೆ ಅಪಘಾತಗಳೂ ಆಗುವ ಸಾಧ್ಯತೆ ಇದೆ. ಹಾಗಾಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಿಕೊಡಿ.ರಸ್ತೆಯಲ್ಲಿ ಜೀಬ್ರಾ ಕ್ರಾಸಿಂಗ್ ಹಾಕಿಸಿ. ಪೀಕ್ ಅವರ್‍ನಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ ಎಂದು ಮನವಿ ಮಾಡಿದರು. ಅದಕ್ಕೆ ಇನ್ಸ್‍ಪೆಕ್ಟರ್ ಶ್ರೀಧರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಸಾರ್ವಜನಿಕ ಸಂಪರ್ಕ ಸಭೆ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ರಾಜಾಜಿನಗರ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರು ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

Facebook Comments