‘ಬಲವಂತ ಬಂದ್’ ಮಾಡುವವರ ವಿರುದ್ಧ ಕಠಿಣ ಕ್ರಮ : ಕಮಿಷನರ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.26- ನಾಳೆ ರೈತ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ಸಂದರ್ಭದಲ್ಲಿ ಯಾರಾದರೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದರೆ, ಬಲವಂತವಾಗಿ ಬಂದ್ ಮಾಡಿಸಲು ಮುಂದಾದರೆ ಅಂಥವರ ವಿರುದ್ಧ ಘಟನೆ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಕಮಲಪಂಥ್ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಬಂದ್ ವೇಳೆ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕೋವಿಡ್-19 ನಿಯಮ ಜಾರಿಯಲ್ಲಿದೆ. ಅದರನ್ವ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆಯದಂತೆ ನಾಳೆ ಮುಂಜಾನೆಯಿಂದಲೇ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹಿರಿಯ ಪೊಲೀಸ್ ಅಕಾರಿಗಳು ಸೇರಿದಂತೆ ಬಂದೋಬಸ್ತ್‍ಗಾಗಿ ಒಟ್ಟು 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

11 ಡಿಸಿಪಿ, ಇಬ್ಬರು ಜಂಟಿ ಆಯುಕ್ತರು, ಇಬ್ಬರು ಹೆಚ್ಚುವರಿ ಆಯುಕ್ತರು ಗಸ್ತಿನಲ್ಲಿರುತ್ತಾರೆ. ಸ್ಥಳೀಯ ಪೊಲೀಸರ ಜೊತೆಗೆ 45 ಕೆಎಸ್‍ಆರ್‍ಪಿ, 21 ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಕಮಲ್‍ಪಂಥ್ ತಿಳಿಸಿದರು.

ಯಾವುದೇ ರೀತಿಯ ಅಹಿತಕರ, ಸಣ್ಣಪುಟ್ಟ ಘಟನೆಗಳು ಆಗದಂತೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ರಸ್ತೆ ತಡೆ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಘಟನೆಗಳು ಜರುಗಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಹೇಳಿದರು.

# ಬಂದ್ ವೇಳೆ ಮುನ್ನೆಚ್ಚರಿಕೆ ವಹಿಸಿ ಬಸ್ ಚಾಲಕರಿಗೆ ಸೂಚನೆ
ಬೆಂಗಳೂರು,ಸೆ.26- ನಾಳಿನ ಭಾರತ್ ಬಂದ್ ಸಂದರ್ಭದಲ್ಲಿ ಬಸ್‍ಗಳಿಗೆ ಹಾನಿ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೆಎಸ್‍ಆರ್‍ಟಿಸಿ ಎಲ್ಲ ವಿಭಾಗ ನಿಯಂತ್ರಣಾಕಾರಿಗೆ ನಿರ್ದೇಶನ ನೀಡಿದೆ. ಕರ್ತವ್ಯಕ್ಕೆ ಹಾಜರಾಗುವ ಕಾರ್ಮಿಕರಿಗೆ ಬೆದರಿಕೆ, ಹಲ್ಲೆ ಉಂಟು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆಯಾ ವಿಭಾಗದ ಕಚೇರಿ, ಕಾರ್ಯಾಗಾರ ಬಸ್ ನಿಲ್ದಾಣಗಳಿಗೆ ಧಕ್ಕೆಯಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಲು ಸಂಬಂಧಪಟ್ಟ ಪೊಲೀಸ್ ಆಯುಕ್ತರು, ಜಿಲ್ಲಾ ವರಿಷ್ಠಾಕಾರಿಗಳನ್ನು ಕೋರಿಕೊಳ್ಳುವಂತೆ ಸೂಚಿಸಲಾಗಿದೆ.

ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕರು ಈ ಸೂಚನೆ ನೀಡಿದ್ದು, ನಾಳೆ ಬೆಳಗ್ಗೆ 6 ಗಂಟೆ ನಂತರ ಹೊರಡುವ ಬಸ್‍ಗಳು ಮರಳಿ ಘಟಕಕ್ಕೆ ಬರುವವರೆಗೂ ಸುರಕ್ಷತೆ ಬಗ್ಗೆ ನಿಗಾವಹಿಸಬೇಕು, ಸ್ಥಳೀಯ ಪೊಲೀಸ್ ಅಕಾರಿಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಬೇಕು.

ಬಂದ್ ವೇಳೆ ಬಸ್‍ಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಚಾಲಕ ಮತ್ತು ನಿರ್ವಾಹಕರಿಗೆ ಸೂಚಿಸಬೇಕು. ಒಂದು ವೇಳೆ ಬಸ್‍ಗೆ ಹಾನಿ ಉಂಟಾದರೆ ಪೊಲೀಸ್ ಠಾಣೆಗಳಿಗೆ ದೂರು ನೀಡಿ ಆದಾಯದಲ್ಲಿ ಉಂಟಾದ ನಷ್ಟ ಮತ್ತಿತರ ಘಟನೆಗಳ ವಿವರವನ್ನು ಒಳಗೊಂಡ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ.

Facebook Comments