ಕೆಜಿ ಹಳ್ಳಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಗೆ ಆಯುಕ್ತರಿಂದ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.21- ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಜಿ ಹಳ್ಳಿ ಠಾಣೆಯ ಹೆಡ್‍ಕಾನ್ಸ್‍ಟೆಬಲ್ ಶಿವಕುಮಾರ್ ಅವರನ್ನು ನಗರ ಪೊಲೀಸ್ ಆಯುಕ್ತರಾದ ಕಮಲ್‍ಪಂತ್ ಅವರು ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು. ಶಿವಕುಮಾರ್ ಅವರು ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಸ್‍ಬಿ (ಗುಪ್ತವಾರ್ತೆ) ಕರ್ತವ್ಯ ನಿರ್ವಹಿಸುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರು ಸಿಟಿ ರೌಂಡ್ಸ್ ಮಾಡುತ್ತಿದ್ದರು. ಕೋರಮಂಗಲ, ಬಾಣಸವಾಡಿ, ಹೆಣ್ಣೂರು, ಚಾಮರಾಜಪೇಟೆ, ಪಾದರಾಯನಪುರ, ಜೆಜೆ ನಗರ, ಗೋವಿಂದಪುರ, ಶಿವಾಜಿನಗರ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ರಾತ್ರಿ 9.30ರ ಸುಮಾರಿನಲ್ಲಿ ಕೆಜಿ ಹಳ್ಳಿ ಠಾಣೆಗೆ ಬಂದಿದ್ದಾರೆ.

ಆ ಸಂದರ್ಭದಲ್ಲಿ ಠಾಣೆಯಲ್ಲಿ ಎಸಿಪಿ ಮತ್ತು ಇನ್ಸ್‍ಪೆಕ್ಟರ್ ಇದ್ದರು. ಕಮಿಷನರ್ ಬಂದಿರುವ ವಿಷಯ ತಿಳಿದು ಸ್ಥಳೀಯರು ಅವರನ್ನು ಸನ್ಮಾನ ಮಾಡಲು ಶಾಲು, ಹಾರ ತೆಗೆದುಕೊಂಡು ಠಾಣೆಗೆ ಆಗಮಿಸಿದ್ದರು.

ಇದನ್ನು ಗಮನಿಸಿದ ಆಯುಕ್ತರು ನನಗೆ ಸನ್ಮಾನ ಮಾಡುವುದು ಬೇಡ. ಸದಾಕಾಲ ಫೀಲ್ಡ್‍ನಲ್ಲಿದ್ದು, ಸಾರ್ವಜನಿಕರ ಸೇವೆ ಮಾಡುತ್ತಿರುವ ಕಾನ್‍ಸ್ಟೆಬಲ್ ಮತ್ತು ಹೆಡ್‍ಕಾನ್ಸ್‍ಟೆಬಲ್‍ಗೆ ಸನ್ಮಾನ ಮಾಡಬೇಕು ಎಂದು ತಿಳಿಸಿ ಸ್ಥಳದಲ್ಲಿದ್ದ ಇನ್‍ಸ್ಪೆಕ್ಟರ್ ಅವರನ್ನು ನಿಮ್ಮ ಠಾಣೆಯಲ್ಲಿ ಯಾರು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಕೇಳಿದರು. ಆಗ ಇನ್ಸ್‍ಪೆಕ್ಟರ್ ಅವರು ಎಸ್‍ಬಿ ಕರ್ತವ್ಯ ನಿರ್ವಹಿಸುವ ಹೆಡ್‍ಕಾನ್ಸ್‍ಟೆಬಲ್ ಶಿವಕುಮಾರ್ ಅವರ ಹೆಸರನ್ನು ಸೂಚಿಸಿದರು. ತಕ್ಷಣ ಶಿವಕುಮಾರ್ ಅವರನ್ನು ಠಾಣೆಗೆ ಕರೆಸಿ ಆಯುಕ್ತರು ಸನ್ಮಾನಿಸಿದರು.

Facebook Comments